ಕಪಿಲ್ ಆರೋಗ್ಯದ ಕುರಿತ ವದಂತಿಗೆ ಮದನ್ ಲಾಲ್ ಖಂಡನೆ

ಹೊಸದಿಲ್ಲಿ:ಕಳೆದ ವಾರ ಹೃದಯಾಘಾತವಾದ ಬಳಿಕ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿರುವ 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಆರೋಗ್ಯದ ಕುರಿತ ಊಹಾಪೋಹಗಳನ್ನು ಖಂಡಿಸಿರುವ ಕಪಿಲ್ ಅವರ ಸಹ ಆಟಗಾರ ಮದನ್ ಲಾಲ್ ಇದೊಂದು ಅಸೂಕ್ಷ್ಮ, ಬೇಜವಾಬ್ದಾರಿತನವಾಗಿದೆ ಎಂದು ಟ್ವೀಟಿಸಿದರು. ಭಾರತದ ಕ್ರಿಕೆಟ್ ದಂತಕತೆ ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ನವೆಂಬರ್ 2 ಸೋಮವಾರ ಬೆಳಗ್ಗೆ ಪರಿಶೀಲಿಸದ ಬಳಕೆದಾರರ ವಿವಿಧ ಟ್ವೀಟ್ ಗಳು ಕಪಿಲ್ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ನಿಧನರಾಗಿದ್ದಾರೆ ಎಂಬ ಸುಳ್ಳು ವದಂತಿಗಳನ್ನು ಹಬ್ಬಿಸಿದ್ದವು.
“ನನ್ನ ಸಹೋದ್ಯೋಗಿಯ ಆರೋಗ್ಯ ಹಾಗೂ ಯೋಗಕ್ಷೇಮಗಳ ಕುರಿತು ಊಹಾಪೋಹಗಳು ಸೂಕ್ಷ್ಮವಲ್ಲದ ಹಾಗೂ ಬೇಜವಾಬ್ದಾರಿಯುತವಾಗಿದೆ. ನನ್ನ ಸ್ನೇಹಿತ ಕಪಿಲ್ ದೇವ್ ಚೇತರಿಕೆಯ ಹಾದಿಯಲ್ಲಿದ್ದಾರೆ. ಅವರು ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಕಪಿಲ್ ಆಸ್ಪತ್ರೆಗೆ ಸೇರಿದ ಸಮಯದಲ್ಲಿ ಅವರ ಕುಟುಂಬವು ಒತ್ತಡಕ್ಕೆ ಒಳಗಾಗಿದ್ದು, ದಯವಿಟ್ಟು ಸೂಕ್ಷ್ಮವಾಗಿ ವರ್ತಿಸಿ ಎಂದು ಟ್ವೀಟಿಸಿದರು.





