ಬಿಜೆಪಿ ಜತೆ ಮೈತ್ರಿಗಿಂತ ರಾಜಕೀಯ ಸನ್ಯಾಸಕ್ಕೆ ಆದ್ಯತೆ: ಮಾಯಾವತಿ
ನಿಲುವು ಬದಲಿಸಿದ ಬಿಎಸ್‌ಪಿ ನಾಯಕಿ

ಲಕ್ನೊ, ನ.2: ತಾನು ರಾಜಕೀಯವನ್ನು ಬೇಕಾದರೆ ತೊರೆಯುತ್ತೇನೆ, ಅದರೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಹುಜನ ಸಮಾಜವಾದಿ ಪಕ್ಷ ದ ಅಧ್ಯಕ್ಷೆ ಮಾಯಾವತಿ ಸೋಮವಾರ ಹೇಳಿದ್ದಾರೆ.
ಉತ್ತರಪ್ರದೇಶ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ತನ್ನ ಪಕ್ಷ ಬಿಜೆಪಿಯನ್ನು ಬೆಂಬಲಿಸಲೂ ಸಿದ್ಧ ಎಂದು ಮಾಯಾವತಿ ಶನಿವಾರ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಗ್ಗೆ ವಿವಿಧ ರೀತಿಯ ವಿಮರ್ಶೆ, ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ತನ್ನ ನಿಲುವು ಬದಲಿಸಿದ ಮಾಯಾವತಿ, ಸೋಮವಾರ ಹೊಸದಿಲ್ಲಿಯಲ್ಲಿ ಸುದ್ಧಿಗಾರರ ಜೊತೆ ಮಾತನಾಡಿ ಪಕ್ಷದ ಸಿದ್ಧಾಂತವನ್ನು ಸ್ಪಷ್ಟಪಡಿಸಿದರು. ಚುನಾವಣೆಯಲ್ಲಿ ಬಿಜೆಪಿ ಹಾಗೂ ಇತರ ಕೋಮುವಾದಿ ಮತ್ತು ವಿಭಜಕ ಶಕ್ತಿಗಳೊಂದಿಗೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ ರಾಜಕೀಯದಿಂದ ನಿವೃತ್ತಿ ಪಡೆಯುವುದಕ್ಕೆ ತಾನು ಆದ್ಯತೆ ನೀಡುವುದಾಗಿ ಮುಸ್ಲಿಂ ಸಮುದಾಯದವರಿಗೆ ಭರವಸೆ ನೀಡುತ್ತೇನೆ ಎಂದು ಮಾಯಾವತಿ ಹೇಳಿದರು. ಉತ್ತರಪ್ರದೇಶದಲ್ಲಿ ಬಿಜೆಪಿಯೊಂದಿಗೆ ಸೇರಿ ಸರಕಾರ ರಚಿಸಿದ್ದ ಸಂದರ್ಭದಲ್ಲೂ ಹಿಂದು-ಮುಸ್ಲಿಮ್ ಗಲಭೆ ನಡೆಯಲು ಬಹುಜನ ಸಮಾಜವಾದಿ ಪಕ್ಷ ಆಸ್ಪದ ನೀಡಲಿಲ್ಲ. ಆದರೆ ಕಾಂಗ್ರೆಸ್- ಸಮಾಜವಾದಿ ಪಕ್ಷದ ಆಡಳಿತವಿದ್ದ ಸಂದರ್ಭದಲ್ಲಿ ಉತ್ತರಪ್ರದೇಶ ಹಿಂಸಾಚಾರ, ದಂಗೆಯಿಂದ ನಲುಗಿ ಹೋಗಿತ್ತು ಎಂದವರು ಆರೋಪಿಸಿದರು.







