ವಿಶ್ವದಲ್ಲಿ ದೇಶದ ಕೀರ್ತಿ ಬೆಳಗಿಸಲು ಶ್ರಮಿಸಿ: ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಕರೆ
ಏಕಲವ್ಯ ಸಹಿತ ವಿವಿಧ ಕ್ರೀಡಾ ಪ್ರಶಸ್ತಿ ಪ್ರದಾನ

ಬೆಂಗಳೂರು, ನ. 2: ವಿಶ್ವದಲ್ಲಿ ಭಾರತ ದೇಶದ ಕೀರ್ತಿ ಹೆಚ್ಚುವ ನಿಟ್ಟಿನಲ್ಲಿ ಕ್ರೀಡಾಪಟುಗಳು ಅತ್ಯಂತ ಹೆಚ್ಚಿನ ಶ್ರಮ ವಹಿಸಿ ಸಾಧನೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದಿಲ್ಲಿ, ರಾಜ್ಯದ ಕ್ರೀಡಾಪಟುಗಳಿಗೆ ಕರೆ ನೀಡಿದ್ದಾರೆ.
ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಏರ್ಪಡಿಸಿದ್ದ `ಏಕಲವ್ಯ ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ, ಕ್ರೀಡಾ ಪೋಷಕ ಮತ್ತು ಎನೆಸೆಸ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಕ್ರೀಡಾಪಟುಗಳು ಒಂದು ಪ್ರಶಸ್ತಿಗೆ ತೃಪ್ತರಾಗದೆ ದೇಶದ ಕೀರ್ತಿ ಬೆಳಗಿಸುವ ನಿಟ್ಟಿನಲ್ಲಿ ಶ್ರಮವಹಿಸಬೇಕು ಎಂದು ಸಲಹೆ ಮಾಡಿದರು.
ಪ್ರಧಾನಿ ಮೋದಿಯವರ ಆಶಯದಂತೆ ವಿಶ್ವ ಮಟ್ಟದಲ್ಲಿ ನಮ್ಮ ಕ್ರೀಡಾಪಟುಗಳು ಸಾಧನೆಗೈಯಬೇಕು. ಜೊತೆಗೆ ಆರೋಗ್ಯ ಕಡೆಗೂ ವಿಶೇಷ ಆಸ್ಥೆ ವಹಿಸಬೇಕು ಎಂದು ಸೂಚಿಸಿದ ಯಡಿಯೂರಪ್ಪ, ಏಕಲವ್ಯ ಎಂದ ತಕ್ಷಣವೆ ನಮ್ಮ ನೆನಪಿಗೆ ಬರುವುದು ಗುರುದಕ್ಷಿಣೆಯಾಗಿ ತನ್ನ ಹೆಬ್ಬೆರಳನ್ನೆ ನೀಡಿದ ಶ್ರೇಷ್ಟ ವ್ಯಕ್ತಿ. ಆ ವ್ಯಕ್ತಿಯ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯಡಿಯಲ್ಲಿ ವಿಶೇಷ ಸೇವೆ ಸಲ್ಲಿಸಿದ ವಿದ್ಯಾರ್ಥಿಗಳು ಹಾಗೂ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ನಿರಂತರ ಸಾಧನೆಯಿಂದ ಏನೆಲ್ಲ ಸಾಧಿಸಬಹುದು ಎನ್ನುವುದಕ್ಕೆ ಏಕಲವ್ಯ ಉದಾಹರಣೆ ಎಂದ ಹೇಳಿದ ಅವರು, ತರಬೇತುದಾರರು ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸರಕಾರ ಗೌರವಿಸುತ್ತಿದೆ ಎಂದು ಯಡಿಯೂರಪ್ಪ ಹೇಳಿದರು.
ಕೇಂದ್ರ ಸರಕಾರ ಖೇಲೋ ಇಂಡಿಯಾ, ಫಿಟ್ ಇಂಡಿಯಾ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ. 2028ರ ಒಲಂಪಿಕ್ಸ್ ನಲ್ಲಿ ಕರ್ನಾಟಕ ರಾಜ್ಯದ ಕ್ರೀಡಾಪಟುಗಳು ದೇಶದ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಆಶಯ ವ್ಯಕ್ತಪಡಿಸಿದ ಅವರು, ಇದಕ್ಕೆ ಸರಕಾರ ಎಲ್ಲ ರೀತಿಯ ನೆರವು ಹಾಗೂ ಅಗತ್ಯ ಬೆಂಬಲವನ್ನು ನೀಡಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಾಜಿನಗರ ಕ್ಷೇತ್ರದ ಶಾಸಕ ರಿಝ್ವಾನ್ ಅರ್ಶದ್ ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ. ದೇಶ ಬಲಿಷ್ಟ ವಾಗಲು ಕ್ರೀಡೆ ಬಲಿಷ್ಟವಾಗಬೇಕು. ಕ್ರೀಡೆ ಮೂಲಕ ದೇಶದ ಆರ್ಥಿಕ ಶಕ್ತಿ ವೃದ್ಧಿಸಲಿದೆ. ಕ್ರೀಡೆಯಿಂದ ಸಾಮರಸ್ಯವೂ ಬೆಳೆಯಲು ಸಾಧ್ಯ. ಹೀಗಾಗಿ ಕ್ರೀಡಾಪಟುಗಳು ಎಲ್ಲರಿಗೂ ಮಾದರಿಯಾಗಬೇಕು ಎಂದು ಸಲಹೆ ಮಾಡಿದರು.
ಸಮಾರಂಭದಲ್ಲಿ 2017, 2018 ಮತ್ತು 2019ನೆ ಸಾಲಿನ ಏಕಲವ್ಯ ಸಹಿತ ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಗೈದ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ, ಕಂದಾಯ ಸಚಿವ ಆರ್.ಅಶೋಕ್, ಒಲಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಮೇಲ್ಮನೆ ಸದಸ್ಯ ಕೆ.ಗೋವಿಂದರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.
"ಮೂರು ವರ್ಷಗಳಿಂದ ವಿವಿಧ ಕಾರಣಗಳಿಂದ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಲು ಸಾಧ್ಯವಾಗಿರಲಿಲ್ಲ. ಆದರೆ, ಈ ವರ್ಷ ಕೊರೋನ ಸಂಕಷ್ಟದ ನಡುವೆಯೂ ಪ್ರಶಸ್ತಿ ನೀಡಲು ಸಿಎಂ ಸಮ್ಮತಿಸಿದ್ದಾರೆ. ಸೋಂಕಿನ ಹಿನ್ನೆಲೆಯಲ್ಲಿ ಕ್ರೀಡಾ ತರಬೇತಿಗೆ ಅಡ್ಡಿಯಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರೀಡೆ ಪಠ್ಯದ ಭಾಗವೇ ಆಗಿದೆ. "
-ಸಿ.ಟಿ.ರವಿ, ಯುವಜನಸೇವಾ ಮತ್ತು ಕ್ರೀಡಾ ಸಚಿವ






.jpg)
.jpg)
.jpg)

