ಪಟಾಕಿ ಬಳಕೆ ನಿಷೇಧ ಪ್ರಸ್ತಾವನೆ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಎನ್‌ಜಿಟಿ

ಹೊಸದಿಲ್ಲಿ, ನ.2: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ನವೆಂಬರ್ 7ರಿಂದ 30ರವರೆಗೆ ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕೆಂಬ ಪ್ರಸ್ತಾವನೆ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ತಿಳಿಸಿ ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್‌ಜಿಟಿ) ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಈಗ ಗಾಳಿಯ ಗುಣಮಟ್ಟ ಕುಸಿದಿದ್ದು ಕೊರೋನ ಸೋಂಕು ಉಲ್ಬಣಗೊಳ್ಳುವ ಸಂಭವವಿದೆ. ಈ ಸಂದರ್ಭದಲ್ಲಿ ಪಟಾಕಿ ಸುಡುವುದರಿಂದ ವಾಯುಮಾಲಿನ್ಯದ ಸಮಸ್ಯೆ ಹೆಚ್ಚಲಿದೆ. ಆದ್ದರಿಂದ ನವೆಂಬರ್ 7ರಿಂದ 30ರವರೆಗೆ ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕು ಎಂದು ಕೋರಿ ‘ಇಂಡಿಯನ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನೆಟ್‌ವರ್ಕ್’ ಎಂಬ ಸಂಸ್ಥೆ ಎನ್‌ಜಿಟಿಗೆ ಅರ್ಜಿ ಸಲ್ಲಿಸಿತ್ತು.
ವಾಯುಮಾಲಿನ್ಯದಿಂದಾಗಿ ಹಬ್ಬದ ಸಂದರ್ಭ ಕೊರೋನ ಸೋಂಕಿನ ಪ್ರಕರಣದಲ್ಲಿ ಹೆಚ್ಚಳವಾಗಲಿದೆ ಎಂಬ ಕೇಂದ್ರ ಆರೋಗ್ಯ ಇಲಾಖೆ ಮತ್ತು ದಿಲ್ಲಿ ಆರೋಗ್ಯ ಇಲಾಖೆಯ ಹೇಳಿಕೆಯನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ದಿಲ್ಲಿಯಲ್ಲಿ ಈಗ ದೈನಂದಿನ ಕೊರೋನ ಸೋಂಕಿನ ಪ್ರಮಾಣ 5,000ವಿದ್ದು, ಪಟಾಕಿ ಬಳಕೆಗೆ ಅವಕಾಶ ನೀಡಿದರೆ ಇದು 15,000ಕ್ಕೆ ಹೆಚ್ಚಬಹುದು. ಹಸಿರು ಪಟಾಕಿ ಬಳಸುವುದು ಈ ಸಮಸ್ಯೆಗೆ ಪರಿಹಾರವಾಗದು. ಹೊಗೆಯ ಪ್ರಮಾಣ ಹೆಚ್ಚುವುದರಿಂದ ದಿಲ್ಲಿ ಗ್ಯಾಸ್ ಚೇಂಬರ್ ಆಗಬಹುದು ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ. ಗೋಯೆಲ್ ನೇತೃತ್ವದ ಎನ್‌ಜಿಟಿ, ಈ ವಿಷಯದಲ್ಲಿ ಕಾನೂನು ಸಲಹೆ ನೀಡಲು ಹಿರಿಯ ನ್ಯಾಯವಾದಿಗಳಾದ ರಾಜ್ ಪಂಜ್ವಾನಿ ಮತ್ತು ಶಿಬಾನಿ ಘೋಷ್‌ರನ್ನು ನೇಮಿಸಿತು.
ಅಲ್ಲದೆ ಅರ್ಜಿಯ ಬಗ್ಗೆ ಪ್ರತಿಕ್ರಿಯಿಸುವಂತೆ ತಿಳಿಸಿ ಪರಿಸರ ಮತ್ತು ಅರಣ್ಯ ಸಚಿವಾಲಯ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ದಿಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ದಿಲ್ಲಿ, ಹರ್ಯಾಣ, ಉತ್ತರಪ್ರದೇಶ ಮತ್ತು ರಾಜಸ್ಥಾನದ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿತು.







