ಹಲವು ಕ್ಷೇತ್ರಗಳ ಅನುಭವ ನ್ಯಾಯಾಂಗ ವ್ಯವಸ್ಥೆಯಲ್ಲಿ ದೊರೆಯುತ್ತದೆ: ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ
ಬೆಂಗಳೂರು, ನ.2: ನ್ಯಾಯಾಂಗ ವಲಯದಲ್ಲಿ ಕಾರ್ಯನಿರ್ವಹಿಸುವುದು ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದಂತೆ ಆಗುತ್ತದೆ. ಹೀಗಾಗಿ, ಹೆಚ್ಚಿನ ಪ್ರಮಾಣದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಸೇರ್ಪಡೆಯಾಗಬೇಕು ಎಂದು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಕರೆ ನೀಡಿದ್ದಾರೆ.
ಸೋಮವಾರ ಕರ್ನಾಟಕ ವಕೀಲರ ಪರಿಷತ್ತು ಆಯೋಜಿಸಿದ್ದ ನ್ಯಾಯಾಂಗ ವ್ಯವಸ್ಥೆಯಲ್ಲಿ ಉದ್ಯೋಗಾವಕಾಶಗಳು ಕುರಿತು ಝೂಮ್ ಆ್ಯಪ್ ಮೂಲಕ ಉಪನ್ಯಾಸ ನೀಡಿದ ಅವರು, ನ್ಯಾಯಾಂಗ ವಲಯಕ್ಕೆ ಸೇರಿದರೆ ಉತ್ತಮ ಭವಿಷ್ಯವಿದ್ದು, ನ್ಯಾಯಾಂಗ ಅಧಿಕಾರಿಗಳಾದರೆ ವೃತ್ತಿ ತೃಪ್ತಿಯೂ ಸಹ ಇರುತ್ತದೆ. ಸಮಾಜದ ಎಲ್ಲ ಕ್ಷೇತ್ರಗಳನ್ನು ಗಮನಿಸಲು, ಎಲ್ಲ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಅವಕಾಶ ಇರುತ್ತದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಉತ್ತಮ ಭವಿಷ್ಯವಿದ್ದು, ಉತ್ತಮ ಪ್ರತಿಭಾವಂತರೂ ಇದ್ದಾರೆ. ವ್ಯವಸ್ಥೆಯಲ್ಲಿ ಸುಧಾರಣೆ ತರಲು ಇದರಿಂದ ಸಹಕಾರಿಯಾಗಲಿದೆ ಎಂದರು.
25 ವರ್ಷದ ಯುವ ವಕೀಲರು ಸಹ ಕೆಳ ಹಂತದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ನೇಮಕವಾಗಲು ಈಗಿನ ನೇಮಕಾತಿ ನಿಯಮಗಳಲ್ಲಿ ಅವಕಾಶವಿದೆ. ಇತರೆ ಸರಕಾರಿ ಉದ್ಯೋಗ, ಖಾಸಗಿ ಸಂಸ್ಥೆಗಳಿಗಿಂತಲೂ ಹೆಚ್ಚು ವೇತನ ಸೌಲಭ್ಯಗಳು ದೊರೆಯುತ್ತದೆ. ಈಗಿನ ಪರಿಸ್ಥಿತಿಯಲ್ಲಿ ನ್ಯಾಯಾಧೀಶಕರಿಗೆ ಹೆಚ್ಚಿನ ವೇತನ ದೊರೆಯುತ್ತಿದೆ.
ಓರ್ವ ಸಿವಿಲ್ ನ್ಯಾಯಾಧೀಶರಿಗೆ ಮಾಸಿಕ 87 ಸಾವಿರ ರೂ ವೇತನ, ವಿದ್ಯುತ್, ಪೇಪರ್ ಬಿಲ್ ಪಾವತಿ, ಪ್ರತಿ ತಿಂಗಳು 50 ರಿಂದ 75 ಲೀಟರ್ ಪೆಟ್ರೋಲ್ ದೊರೆಯುತ್ತದೆ. ಈ ಹಿಂದೆ ಸಿವಿಲ್ ನ್ಯಾಯಾಧೀಶರಿಗೆ ದ್ವಿಚಕ್ರ ವಾಹನ ಪಡೆಯಲು ಸಾಧ್ಯವಾಗುತ್ತಿಲಿಲ್ಲ. ಈಗ ಎಲ್ಲವೂ ಬದಲಾಗಿದೆ. ಜಿಲ್ಲಾ ನ್ಯಾಯಾಧೀಶರಿಗೆ 1.50 ಲಕ್ಷಕ್ಕೂ ಹೆಚ್ಚು ವೇತನವಿದೆ ಎಂದು ಮಾಹಿತಿ ನೀಡಿದರು.
ನ್ಯಾಯಾಂಗ ಅಧಿಕಾರಿಯಾದರೆ ಸಾಮಾನ್ಯ ವ್ಯಕ್ತಿಗಳ ಕುಂದುಕೊರತೆಗಳನ್ನು ಬಗೆಹರಿಸುವ, ನ್ಯಾಯಕೊಡಿಸಿದ ತೃಪ್ತಿ ಇರುತ್ತದೆ. ಕುಟುಂಬಗಳನ್ನು ಒಂದುಗೂಡಿಸುವ ಕೆಲಸ ಮಾಡಬಹುದು. ನ್ಯಾಯಾಧೀಶರು ಒಬ್ಬ ಉತ್ತಮ ಕೌನ್ಸಿಲರ್ ಆಗಬಹುದು. ಹೀಗೆ ಹತ್ತು ಹಲವು ಪಾತ್ರಗಳನ್ನು ನ್ಯಾಯಾಂಗ ಅಧಿಕಾರಿಗಳು ನಿರ್ವಹಿಸಬಹುದು. ಇಂಥ ಅವಕಾಶ ಬೇರೆ ಯಾವುದೇ ವೃತ್ತಿಯಲ್ಲೂ ಇಲ್ಲ ಎಂದರು.
ನ್ಯಾಯಾಧೀಶರನ್ನು ಜಗತ್ತಿನ ಯಾವುದೇ ಶಕ್ತಿ ನಿಯಂತ್ರಿಸಲು ಸಾಧ್ಯವಿಲ್ಲ. ಅಷ್ಟೊಂದು ಸಾಮಥ್ರ್ಯ, ಶಕ್ತಿ ಇರುತ್ತದೆ. ವಕೀಲರಾಗಿ ಕಲಿಯುವುದಕ್ಕಿಂತ ನ್ಯಾಯಾಧೀಶಕರಾಗಿ ಹೆಚ್ಚು ಕಲಿಯಲು ಅವಕಾಶವಿದೆ. ಪ್ರತಿಯೊಂದು ವ್ಯಾಜ್ಯಕ್ಕೂ ಒಂದೊಂದು ಬಣ್ಣ ಇರುತ್ತದೆ. ಪ್ರತಿಯೊಂದು ಅಪರಾಧ ಪ್ರಕರಣಗಳ ಹಿಂದೆ ಹಲವು ಮುಖಗಳಿರುತ್ತವೆ. ಒಬ್ಬ ನ್ಯಾಯಾಧೀಶರು ಇಂಜಿನಿಯರ್‍ಗಳಾಗಬಹುದು. ವೈದ್ಯರಾಗಬಹುದು. ಒಬ್ಬ ವಕೀಲರು ಒಂದು ಕ್ಷೇತ್ರದಲ್ಲಿ ಮಾತ್ರ ಪರಿಣಿತರಾಗಬಹುದು. ಆದರೆ ನ್ಯಾಯಾಧೀಶರು ಎಲ್ಲಾ ಕ್ಷೇತ್ರಗಳ ಬಗ್ಗೆಯೂ ಪರಿಣಿತಿ ಪಡೆಯಬಹುದು ಎಂದರು.
ತಾವು ಮುಂಬೈನಲ್ಲಿ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದನ್ನು ನೆನಪು ಮಾಡಿಕೊಂಡ ಮುಖ್ಯ ನ್ಯಾಯಮೂರ್ತಿ ಅವರು, ಆಗ ಪ್ರತಿಯೊಂದು ಜಿಲ್ಲೆಯಲ್ಲೂ ನೇಮಕಾತಿ ಆಂದೋಲನ ನಡೆಸಿದ್ದು, ಇದರ ಪರಿಣಾಮ ಹೆಚ್ಚು ಮಂದಿ ನ್ಯಾಯಾಂಗ ವ್ಯವಸ್ಥೆಗೆ ಸೇರಲು ಸಾಧ್ಯವಾಯಿತು ಎಂದು ಹೇಳಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರಾದ ಅನಿಲ್ ಕುಮಾರ್ ಜೆ.ಎಂ. ಉಪಾಧ್ಯಕ್ಷರಾದ ಎನ್. ಶಿವಕುಮಾರ್, ಕೆ.ಎಸ್.ಬಿ.ಸಿ, ಲಾ ಅಕಾಡೆಮಿ ಅಧ್ಯಕ್ಷರಾದ ಎಸ್.ಎಫ್. ಗೌತಮ್ ಚಂದ್ ಅವರು ಈ ಉಪನ್ಯಾಸವನ್ನು ಆಯೋಜಿಸಿದ್ದರು.







