ಆರ್ಥಿಕ ಸಂಕಷ್ಟದಿಂದ ಗುಜರಿ ವ್ಯಾಪಾರಕ್ಕಿಳಿದ ಸಿನೆಮಾ ನಿರ್ದೇಶಕ !
ಲಾಕ್‌ಡೌನ್‌ನಿಂದ ಯಾಕೂಬ್ ಗುಲ್ವಾಡಿಯ ಚಲನಚಿತ್ರ ಪ್ರದರ್ಶನ ರದ್ದು

ಕುಂದಾಪುರ, ನ.2: ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ, ಕೊರೋನ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಮತ್ತೆ ಗುಜರಿ ಅಂಗಡಿಯತ್ತ ಮುಖ ಮಾಡಿದ್ದಾರೆ.
‘ರಿಸರ್ವೆಶನ್’ ಮತ್ತು ‘ಟ್ರಿಪಲ್ ತಲಾಕ್’ನಂತಹ ಸೂಕ್ಷ್ಮ ಸಂವೇದನೆಯ ಸಿನೆಮಾಗಳನ್ನು ಮಾಡಿದ ಯಾಕೂಬ್ ಖಾದರ್ ಗುಲ್ವಾಡಿ, ಕಳೆದ 25 ವರ್ಷ ಗಳಿಂದ ಬದುಕು ಕಟ್ಟಿಕೊಳ್ಳಲು, ಪುಸ್ತಕ ಪ್ರೀತಿ ಬೆಳೆಸಲು ಮತ್ತು ಬಹಳ ಮುಖ್ಯ ವಾಗಿ ಸಿನೆಮಾ ತಯಾರಿಸಲು ಕಾರಣವಾದ ಗುಜರಿ ವ್ಯಾಪಾರಕ್ಕೆ ಮತ್ತೆ ಮೊರೆ ಹೋಗಿದ್ದಾರೆ.
ಕುಂದಾಪುರ ತಾಲೂಕಿನ ಗುಲ್ವಾಡಿಯ ಖಾದರ್, ಆರನೆ ತರಗತಿಯಲ್ಲಿ ಇರುವಾಗ ಅರ್ಧಕ್ಕೆ ಶಾಲೆ ಬಿಟ್ಟು ಸೈಕಲಿನಲ್ಲಿಯೇ ಗುಜರಿ ವ್ಯಾಪಾರ ನಡೆಸುವ ಕಾಯಕದಲ್ಲಿ ತೊಡಗಿಸಿಕೊಂಡವರು. ಅಂದು ಇವರು, ಗುಜರಿಗೆ ಬಂದ ಪುಸ್ತಕ ಗಳನ್ನು ಓದಿ, ಓದುವ ಹುಚ್ಚನ್ನು ಮೈಗೂಡಿಸಿಕೊಂಡರು.
ಗುಲಾಬಿ ಟಾಕೀಸ್ ಸಿನೆಮಾದಲ್ಲಿ ಕುಂದಾಪುರ ಕನ್ನಡ ಮತ್ತು ಬ್ಯಾರಿ ಭಾಷೆ, ಸಾಂಸ್ಕೃತಿಕ ವಿಚಾರಗಳಿಗಾಗಿ ನಿರ್ದೇಶಕ ಗಿರೀಶ್ ಕಾಸರವಳ್ಳಿ, 2006ರಲ್ಲಿ ಗುಲ್ವಾಡಿ ಅವರನ್ನು ಸಂಪರ್ಕಿಸಿದರು. ಅಂದಿನಿಂದ ಸಿನೆಮಾ ಬಗ್ಗೆ ಅರಿತುಕೊಂಡ ಖಾದರ್, 2012-13ರಲ್ಲಿ ನಿಖಿಲ್ ಮಂಜು ಅವರ ಹಜ್ ಮತ್ತು ಗೆರೆಗಳು ಸಿನೆಮಾದಲ್ಲಿ ಕೆಲಸ ಹಾಗೂ ಪಾತ್ರ ಮಾಡಿದ್ದರು.
2016-17ರಲ್ಲಿ ಸ್ವತಃ ಖಾದರ್ ಅವರೇ ಸಿನೆಮಾ ನಿರ್ದೇಶನಕ್ಕೆ ಇಳಿದು, ರಿಸವೇರ್ಷನ್ ಚಿತ್ರ ತಯಾರಿಸಿದರು. ಬಳಿಕ ‘ಟ್ರಿಪಲ್ ತಲಾಕ್’ ಸಿನೆಮಾವನ್ನು ಕೂಡ ಮಾಡಿದರು. ಇವು ಎರಡೂ ಸಿನೆಮಾ ಕೂಡ ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡವು.
ಕೊರೋನದಿಂದ ಅಡ್ಡಿ: ಕಳೆದ ವರ್ಷ ಖಾದರ್, ಮುಂಬೈಯ ಹಿರಿಯ ಸ್ನೇಹಿತರ ಸಹಕಾರದಿಂದ ತನ್ನದೇ ನಿರ್ದೇಶನದಲ್ಲಿ ಬಹಳ ನಿರೀಕ್ಷೆಯೊಂದಿಗೆ ‘ಟ್ರಿಪಲ್ ತಲಾಕ್’ ಬ್ಯಾರಿ ಭಾಷೆಯ ಚಲನಚಿತ್ರವನ್ನು ತಯಾರಿಸಿದ್ದರು. ಈ ಸಿನೆಮಾ 54 ದೇಶಗಳಲ್ಲಿ ಪ್ರದರ್ಶನ ಕಾಣಬೇಕಾಗಿತ್ತು ಮತ್ತು ಅನೇಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇದನ್ನು ಕಳುಹಿಸಲಾಗಿತ್ತು. ಆದರೆ ಕೊರೋನ ಕಾರಣಗಳಿಂದ ಅನೇಕ ಚಿತ್ರೋತ್ಸವಗಳು ರದ್ದುಗೊಂಡವು.
‘ಈ ಸಿನಿಮಾವನ್ನು ಎರಡು ವರ್ಷಗಳಿಂದ ತುಂಬಾ ಕಷ್ಟಪಟ್ಟು ಹಾಗೂ ಸಾಲ ಮಾಡಿ ತಯಾರಿಸಿದ್ದೆ. ಇದರಿಂದ ಬಹಳ ಒತ್ತಡಕ್ಕೆ ಒಳಗಾಗಿ ಮಾನಸಿಕವಾಗಿ ಜರ್ಜರಿತಗೊಂಡಿದ್ದೇನೆ.’ ಎಂದು ಯಾಕೂಬ್ ಖಾದರ್ ಗುಲ್ವಾಡಿ ತಿಳಿಸಿದರು.
ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕಳೆದ ಮೂರು ತಿಂಗಳಿನಿಂದ ಗೆಳೆಯನ ಸಹಕಾರದಿಂದ ಗುಲ್ವಾಡಿಯಲ್ಲಿ ಮತ್ತೆ ಗುಜರಿ ಅಂಗಡಿಯನ್ನು ಆರಂಭಿಸಿದ್ದೇನೆ. ಈ ಮಧ್ಯೆ ಪತಿ ತೀರಿ ಹೋದ ಬಳಿಕ ಪತ್ನಿ ಮರೆಯಲ್ಲಿರುವ ‘ಇದ್ದತ್’ ಸಿನೆಮಾ ವನ್ನು ತಯಾರಿಸುವ ಆಲೋಚನೆ ಮಾಡಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಇದೀಗ ಆಫಿಕಾದ ನೈಜೀರಿಯಾದಲ್ಲಿ ನಡೆಯುವ ಪ್ರತಿಷ್ಠಿತ 17ನೆ ಅಬುಜಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2020ಕ್ಕೆ ಬ್ಯಾರಿ ಭಾಷೆಯ ಸಿನಿಮಾ ಟ್ರಿಪಲ್ ತಲಾಕ್ ಆಯ್ಕೆಯಾಗಿದೆ. ಶ್ರೇಷ್ಠ ನಿರ್ದೇಶಕ ಹಾಗೂ ಶ್ರೇಷ್ಠ ನಟಿ ವಿಭಾಗದಲ್ಲಿ ಈ ಚಿತ್ರ ಸ್ಪರ್ಧೆಯಲ್ಲಿದೆ ಎಂದು ಯಾಕೂಬ್ ಖಾದರ್ ಸಂತೋಷ ವ್ಯಕ್ತಪಡಿಸಿದ್ದಾರೆ.









