ನಿವೃತ್ತ ಮುಖ್ಯ ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶಿಕ್ಷಣ ಸಚಿವ
ಉಡುಪಿ, ನ.2: ತನ್ನ ಸೇವಾ ನಿವೃತ್ತಿಯ ದಿನದಂದು ಶಾಲಾ ಬಡ ವಿದ್ಯಾರ್ಥಿ ನಿಗೆ ತನ್ನ ಸ್ವಂತ ಖರ್ಚಿನಿಂದ ಮನೆ ನಿರ್ಮಿಸಿಕೊಟ್ಟ ನಿಟ್ಟೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ಅವರ ಕಾರ್ಯಕ್ಕೆ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
32 ವರ್ಷ ಶಿಕ್ಷಕರಾಗಿ ಮತ್ತು 5 ವರ್ಷ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಶನಿವಾರ ಸೇವಾ ನಿವೃತ್ತಿ ಹೊಂದಿದ ಮುರಲಿ ಕಡೆಕಾರ್, ತನ್ನ ಶಾಲೆಯ ತೀರಾ ಬಡಕುಟುಂಬದ ಕಕ್ಕುಂಜೆ ವಾರ್ಡ್ ನಿವಾಸಿ, ನಯನ ಅವರಿಗೆ 4 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಹಸ್ತಾಂತರಿಸಿದ್ದರು. ಈ ಮಾದರಿ ಕಾರ್ಯಕ್ಕೆ ಸಚಿವರು, ಮುರಲಿ ಕಡೆಕಾರ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ತನ್ನ ಫೇಸ್‌ಬುಕ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಚಿವರು, ಮುರಳಿ ಕಡೇಕರ್‌ರೊಂದಿಗೆ ಮಾತನಾಡಿ ಅವರಿಗೆ ಧನ್ಯವಾದ ಗಳನ್ನು ತಿಳಿಸಿದೆ. ಅತ್ಯಂತ ನಿರ್ಲಿಪ್ತ ಭಾವನೆಯಿಂದ ಅವರು ನನ್ನ ಧನ್ಯವಾದ ಗಳನ್ನು ಸ್ವೀಕರಿಸಿದರು. ನಿವೃತ್ತಿ ಆಗಿರುವ ಈ ಶಿಕ್ಷಕ ಅವರ ಶಾಲೆಯ ಒಂಬತ್ತನೇ ತರಗತಿಯ ಬಾಲಕಿ ನಯನ ಕುಟುಂಬ ವಾಸವಾಗಿದ್ದ ಮನೆಯ ಪರಿಸ್ಥಿತಿ ಗಮನಿಸಿ ತನ್ನ ಸ್ವಂತ ಹಣದಿಂದ ಒಂದು ಒಳ್ಳೆಯ ಮನೆಯನ್ನು ಕಟ್ಟಿಸಿಕೊಟ್ಟು ಕೃತಾರ್ಥರಾಗಿದ್ದಾರೆ. ಇಷ್ಟೇ ಅಲ್ಲದೆ ನಯನಾಳ ಉನ್ನತ ಶಿಕ್ಷಣಕ್ಕೂ ಆರ್ಥಿಕ ಸಹಾಯ ಮಾಡಲು ನಿರ್ಧರಿಸಿದ್ದಾರೆ. ಇಂತಹ ಶಿಕ್ಷಕರೇ ಸಮಾಜದ ನಿಜವಾದ ಶಕ್ತಿ ಎಂದು ಹೇಳಿದ್ದಾರೆ.







