ಗಾಂಜಾ ಸಾಗಾಟ: ಆರೋಪಿ ಸೆರೆ
23 ಕೆಜಿ ಗಾಂಜಾ ಸಹಿತ 2.54 ಲಕ್ಷ ಮೌಲ್ಯದ ಸೊತ್ತು ವಶ
ಮಂಗಳೂರು, ನ.2: ಮಂಜನಾಡಿ ಗ್ರಾಮದ ವಿಜಯನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಆರೋಪಿಯೊಬ್ಬನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ನರಿಂಗಾನ ತೌಡುಗೋಳಿ ನಿವಾಸಿ ಅಬ್ದುಲ್ ಖಾದರ್ ತನ್ಸಿಫ್ (23) ಬಂಧಿತ ಆರೋಪಿ.
ಪ್ರಕರಣ ವಿವರ: ಆರೋಪಿ ತನ್ಸಿಫ್ ಅ.30ರಂದು ತನ್ನ ಬೈಕ್‌ನಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯಿಂದ 23 ಕೆಜಿ 480ಗ್ರಾಂ ತೂಕದ ಗಾಂಜಾ ಪ್ಯಾಕೇಟ್‌ಗಳನ್ನು ಹಾಗೂ ಬೈಕ್ ಸೇರಿದಂತೆ 2.54 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರ್, ಉಪಪೊಲೀಸ್ ಆಯುಕ್ತರ ನಿರ್ದೇಶನದಂತೆ ಸಹಾಯಕ ಪೊಲೀಸ್ ಆಯುಕ್ತ ರಂಜಿತ್‌ಕುಮಾರ್ ಬಂಡಾರು ಮಾರ್ಗದರ್ಶನದಲ್ಲಿ ಕೊಣಾಜೆ ಪೊಲೀಸ್ ನಿರೀಕ್ಷಕ ಮಧುಸೂದನ್ ಮತ್ತು ಪಿಎಸ್‌ಐ ಶರಣಪ್ಪ ಭಂಡಾರಿ, ಮಲ್ಲಿಕಾರ್ಜುನ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ಮುಂದಿನ ತನಿಖೆಯನ್ನು ನಾರ್ಕೊಟಿಕ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.







