ಬ್ಯಾಂಕ್ ಆಫ್ ಬರೋಡಾ ಸಾಲ ಅಗ್ಗ
ಮಂಗಳೂರು, ನ.2: ಭಾರತದ ಸಾರ್ವಜನಿಕ ವಲಯದ ಮೂರನೇ ಅತಿದೊಡ್ಡ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ, ರೆಪೊ ಸಂಪರ್ಕಿತ ಸಾಲ ದರವನ್ನು (ಬಿಆರ್‌ಎಲ್‌ಎಲ್‌ಆರ್) 15 ಮೂಲ ಅಂಶಗಳಷ್ಟು ಇಳಿಸಿದೆ.
ನ.1ರಿಂದ ನೂತನ ದರ ಜಾರಿಗೆ ಬಂದಿದ್ದು, ಈ ಹಿಂದೆ ಇದ್ದ ಶೇ.7ರ ಬದಲಾಗಿ ನೂತನ ದರ ಶೇ.6.85ಕ್ಕೆ ಇಳಿಕೆಯಾಗಿದೆ. ಇದರಿಂದ ರೆಪೊ ದರ ಜತೆ ಸಂಬಂಧ ಹೊಂದಿದ ಎಲ್ಲ ಚಿಲ್ಲರೆ ಸಾಲಗಳು ಗ್ರಾಹಕರಿಗೆ ಅಗ್ಗವಾಗಲಿದೆ.
ಗೃಹಸಾಲ, ಅಡಮಾನ ಸಾಲ, ವಾಹನ ಸಾಲ, ಶಿಕ್ಷಣ ಸಾಲ, ವೈಯಕ್ತಿಕ ಸಾಲ ಮತ್ತು ಇತರ ಎಲ್ಲ ಚಿಲ್ಲರೆ ಸಾಲಗಳಿಗೆ ಇದು ಅನ್ವಯ ವಾಗಲಿದೆ. ಇದಕ್ಕೂ ಮುನ್ನ ಹಬ್ಬದ ಋತುವಿನಲ್ಲಿ ಗೃಹ ಮತ್ತು ವಾಹನ ಸಾಲ ಮೇಲಿನ ಬಡ್ಡಿಯನ್ನು ಇಳಿಸಲಾಗಿತ್ತು. ಇದೀಗ ಬಿಆರ್‌ಎಲ್‌ಎಲ್‌ಆರ್ ಪರಿಷ್ಕರಣೆಯೊಂದಿಗೆ ಗೃಹ ಸಾಲದ ಬಡ್ಡಿದರ ಶೇ.6.85 ಹಾಗೂ ವಾಹನ ಸಾಲ ಮೇಲಿನ ಬಡ್ಡಿದರ ಶೇ.7.10ರಿಂದ ಆರಂಭವಾಗಲಿದೆ.
ಅಲ್ಲದೆ, ಅಡಮಾನ ಸಾಲದ ಬಡ್ಡಿದರ ಶೇ.8.05 ಹಾಗೂ ಶಿಕ್ಷಣ ಸಾಲದ ಮೇಲಿನ ಬಡ್ಡಿದರ ಶೇ.6.85ರಿಂದ ಆರಂಭವಾಗಲಿದೆ ಎಂದು ಅಡಮಾನ ಮತ್ತು ಇತರ ಚಿಲ್ಲರೆ ಸಾಲಗಳ ವಿಭಾಗದ ಪ್ರಧಾನ ವ್ಯವಸ್ಥಾಪಕ ಹರ್ಷದ್‌ಕುಮಾರ್ ಟಿ.ಸೋಳಂಕಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.