ಇಎಂಐ ಪಾವತಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾದ ಕುಟುಂಬ

ಗುವಾಹತಿ, ನ. 2: ಇಎಂಐಗಳನ್ನು ಪಾವತಿಸಲು ಸಾಧ್ಯವಾಗದೆ ಒಂದೇ ಕುಟುಂಬಕ್ಕೆ ಸೇರಿದ ಐವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಸ್ಸಾಂನ ಕೋಕ್ರಝಾರ್ ಜಿಲ್ಲೆಯಲ್ಲಿ ಸೋಮವಾರ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ನಿರ್ಮಲ್ ಪೌಲ್, ಅವರ ಪತ್ನಿ ಮಲ್ಲಿಕಾ (40) ಹಾಗೂ ಅವರ ಮೂವರು ಪುತ್ರಿಯರು ಎಂದು ಗುರುತಿಸಲಾಗಿದೆ.
ಅವರು ಕೋಕ್ರಝಾರ್ ಜಿಲ್ಲೆಯ ತುಲ್ಸೀಬೀಲ್‌ನಲ್ಲಿರುವ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ರಾಕೇಶ್ ರೌಶಾನ್ ತಿಳಿಸಿದ್ದಾರೆ. ಅಡುಗೆ ಅನಿಲದ ಉಪ ಏಜೆನ್ಸಿ ಹೊಂದಿದ್ದ ನಿರ್ಮಲ್ ಪೌಲ್‌ಗೆ 25ರಿಂದ 30 ಲಕ್ಷ ರೂ. ವರೆಗೆ ಸಾಲ ಇತ್ತು. ಆದರೆ, ಬ್ಯಾಂಕ್‌ಗೆ ಇಎಂಐ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಸಾಲದ ಬಗ್ಗೆ ಆತಂಕಗೊಂಡ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಪೌಲ್ ಅವರ ಹಿರಿಯ ಪುತ್ರಿ ಪೂಜಾ (25) ವಿಜ್ಞಾನ ಪದವೀಧರೆಯಾಗಿದ್ದು, ಖಾಸಗಿ ಶಾಲೆಯೊಂದರಲ್ಲಿ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಉಳಿದ ಇಬ್ಬರು ಪುತ್ರಿಯರಾದ ನೀಲಾ ಹಾಗೂ ಸ್ನೇಹಾ ಶಾಲೆಗೆ ಹೋಗುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.





