ರಾಜ್ಯದ ಪ್ರತಿ ಗ್ರಾಪಂನಲ್ಲಿ ಮಣ್ಣು ಆರೋಗ್ಯ ಕೇಂದ್ರ ಸ್ಥಾಪನೆ: ಬಿ.ಸಿ.ಪಾಟೀಲ್

ಹಾವೇರಿ, ನ.2: ರೈತರು ಉತ್ತಮ ಇಳುವರಿ ಪಡೆಯಲು ಬಿತ್ತನೆಗೂ ಮುನ್ನ ಮಣ್ಣು ಪರೀಕ್ಷೆ ಮಾಡಿಸುವ ಅವಶ್ಯಕತೆ ಇದ್ದು, ಆ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಲ್ಲೂ ಮಣ್ಣು ಆರೋಗ್ಯ ಕೇಂದ್ರ ಸ್ಥಾಪಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.
ಸೋಮವಾರ ಹಾವೇರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ರಾಜ್ಯದಲ್ಲಿ 247 ಮಣ್ಣು ಆರೋಗ್ಯ ಕೇಂದ್ರಗಳಿದ್ದು, ಪ್ರತಿ ಗ್ರಾಪಂನಲ್ಲೂ ಮಣ್ಣು ಆರೋಗ್ಯ ಕೇಂದ್ರ ಸ್ಥಾಪಿಸಿದರೆ, ರೈತರಿಗೆ ಅನುಕೂಲವಾಗುತ್ತದೆ ಎಂದರು.
ಆಹಾರ ಸಂಸ್ಕರಣೆ ಮತ್ತು ಪ್ಯಾಕಿಂಗ್ ಬಗ್ಗೆ ತರಬೇತಿ ಕೊಡಿಸಲು ತೀರ್ಮಾನಿಸಲಾಗಿದ್ದು, ಪ್ರತಿ ತಿಂಗಳು ತಾಲೂಕಿಗೆ ಒಬ್ಬ ರೈತನಿಗೆ ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಲ್ಲಿ ತರಬೇತಿ ಕೊಡಲಾಗುತ್ತದೆ. ತರಬೇತಿ ಪಡೆದ ರೈತರು ಪ್ರತಿ ತಾಲೂಕಿನಲ್ಲಿ ಆಹಾರ ಸಂಸ್ಕರಣೆ ಘಟಕ ಆರಂಭಿಸಲು ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಖಾಲಿ ಇರುವ ಉಗ್ರಾಣಗಳನ್ನು ಶೀತಲೀಕರಣ ಘಟಕವನ್ನಾಗಿ ಪರಿವರ್ತನೆ ಮಾಡಲು ಸಹಕಾರ ಸಚಿವರೊಂದಿಗೆ ಚರ್ಚೆ ಮಾಡಲಾಗಿದೆ. ಇದರಿಂದ, ಕೃಷಿ ಉತ್ಪನ್ನಗಳು ಕೆಡದಂತೆ ರಕ್ಷಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಯೂರಿಯಾವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ ರಾಜ್ಯದ ವಿವಿಧ ಜಿಲ್ಲೆಗಳ 149 ಅಂಗಡಿಗಳ ಪರವಾನಿಗೆಯನ್ನು ರದ್ದು ಮಾಡಿದ್ದೇವೆ ಎಂದರು.







