ಪ್ಲೇಆಫ್‌ನ ನಾಲ್ಕನೇ ಸ್ಥಾನ ಹೈದರಾಬಾದ್ ತಂಡದ ಪಾಲಾಗುವುದೇ?

ಹೊಸದಿಲ್ಲಿ: ಐಪಿಎಲ್ ಪ್ಲೇ ಆಫ್ ಹಂತದಲ್ಲಿ ಇನ್ನು ಒಂದು ಸ್ಥಾನ ಮಾತ್ರ ಖಾಲಿ ಉಳಿದಿದೆ. ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ ನಡುವಿನ ಪಂದ್ಯದ ಬಳಿಕ ಇನ್ನೆರಡು ಪ್ಲೇ ಆಫ್ ಸ್ಥಾನಗಳು ಭರ್ತಿಯಾಗಿವೆ. ಈ ಎರಡು ತಂಡಗಳು ಪ್ಲೇ ಆಫ್‌ಗೆ ತೇರ್ಗಡೆಯಾಗಿವೆ.
ಪ್ಲೇ ಆಫ್‌ನ ನಾಲ್ಕನೇ ಸ್ಥಾನಕ್ಕಾಗಿ ಈಗಲೂ ಸ್ಪರ್ಧೆ ಮುಂದುವರಿದಿದೆ. ಇಂದು ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯುವ ಅಂತಿಮ ಲೀಗ್ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆಯುವ ತಂಡ ಯಾವುದೆಂದು ನಿರ್ಧಾರವಾಗಲಿದೆ.
1. ಮುಂಬೈ ಇಂಡಿಯನ್ಸ್ ತಂಡ 18 ಅಂಕ ಗಳಿಸಿ ಮೊದಲ ಸ್ಥಾನದಲ್ಲಿದೆ. ಈ ತಂಡಕ್ಕೆ ಇನ್ನೂ ಒಂದು ಪಂದ್ಯ ಆಡಲು ಬಾಕಿ ಇದ್ದು, ಒಟ್ಟು 20 ಅಂಕ ಗಳಿಸಿ ಲೀಗ್ ಅಭಿಯಾನ ಮುಗಿಸುವ ಅವಕಾಶವಿದೆ.
2. ಡೆಲ್ಲಿ ಕ್ಯಾಪಿಟಲ್ಸ್ ಸೋಮವಾರ ಆರ್‌ಸಿಬಿ ವಿರುದ್ಧ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದು,ಈ ಮೂಲಕ ಒಟ್ಟು 16 ಅಂಕ ಕಲೆ ಹಾಕಿದೆ.
3. ಒಂದು ವೇಳೆ ಮುಂಬೈ ತಂಡ ಹೈದರಾಬಾದ್ ತಂಡವನ್ನು ಸೋಲಿಸಿದರೆ ಬೆಂಗಳೂರು(14 ಅಂಕ)ಹಾಗೂ ಕೋಲ್ಕತಾ ನೈಟ್ ರೈಡರ್ಸ್ (14 ಅಂಕ)ನೆಟ್ ರನ್‌ರೇಟ್ ಆಧಾರದಲ್ಲಿ ಮೂರನೇ ಹಾಗೂ ನಾಲ್ಕನೇ ಸ್ಥಾನ ಪಡೆಯಲಿವೆ.
4. ಒಂದು ವೇಳೆ ಹೈದರಾಬಾದ್ ಇಂದಿನ ಪಂದ್ಯದಲ್ಲಿ ಜಯ ಸಾಧಿಸಿದರೆ,ಒಟ್ಟು 14 ಅಂಕಗಳನ್ನು ಪಡೆಯಲಿದೆ. ತನ್ನ ಉತ್ತಮ ರನ್‌ರೇಟ್ ಆಧಾರದಲ್ಲಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಲಿದೆ. ಈ ಸಂದರ್ಭದಲ್ಲಿ ಬೆಂಗಳೂರು ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಡಲಿದೆ. ಇಂತಹ ಸಂದರ್ಭದಲ್ಲಿ ಮೂರು ತಂಡಗಳು 14 ಅಂಕಗಳನ್ನು ಪಡೆದಂತಾಗುತ್ತದೆ.
ಐಪಿಎಲ್-2020ರ ಋತು ತೀವ್ರ ಸ್ಪರ್ಧೆಯಿಂದ ಕೂಡಿತ್ತು. ಇದೇ ಮೊದಲ ಬಾರಿ ಕೆಳ ಸ್ಥಾನದಲ್ಲಿರುವ ತಂಡ 12 ಅಂಕ ಗಳಿಸಿದೆ. ಲೀಗ್ ಹಂತದಲ್ಲಿ ಒಂದು ಪಂದ್ಯ ಮಾತ್ರ ಬಾಕಿ ಉಳಿದಿದ್ದು, ಪ್ಲೇ ಆಫ್ ಸ್ಥಾನ ಈಗಲೂ ಮುಕ್ತವಾಗಿದೆ. ಡೆಲ್ಲಿ ಹಾಗೂ ಆರ್‌ಸಿಬಿ ಪ್ಲೇ ಆಫ್‌ನಲ್ಲಿ ಮುಂಬೈ ತಂಡವನ್ನು ಸೇರಿಕೊಂಡಿವೆ. ಈಗ ಒಂದು ಸ್ಥಾನ ಖಾಲಿ ಉಳಿದಿದೆ. ರವಿವಾರದ ಪಂದ್ಯದ ಬಳಿಕ ಪಂಜಾಬ್ ಹಾಗೂ ರಾಜಸ್ಥಾನ ಟೂರ್ನಿಯಿಂದ ನಿರ್ಗಮಿಸಿರುವ ಚೆನ್ನೈ ತಂಡವನ್ನು ಸೇರಿಸಿಕೊಂಡಿದೆ.







