ಎಲ್ಲ ಮಾದರಿಯ ಕ್ರಿಕೆಟ್‌ಗೆ ವಾಟ್ಸನ್ ವಿದಾಯ

ದುಬೈ: ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ನ ಆರಂಭಿಕ ಆಟಗಾರ ಶೇನ್ ವಾಟ್ಸನ್ ಮಂಗಳವಾರ ಅಧಿಕೃತವಾಗಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು.
39ರ ಹರೆಯದ ಕ್ರಿಕೆಟಿಗ ವೀಡಿಯೊವನ್ನು ಬಿಡುಗಡೆ ಮಾಡಿ ತನ್ನ ನಿರ್ಧಾರವನ್ನು ಪ್ರಕಟಿಸಿದರು.
ಒಂದು ಅಧ್ಯಾಯ ಮುಗಿಯಿತು. ಇನ್ನೊಂದು ಹೊಸ ಹಾಗೂ ಕುತೂಹಲಕಾರಿ ಅಧ್ಯಾಯ ಆರಂಭವಾಗಲಿದೆ ಎಂದು ತನ್ನ ವೀಡಿಯೊದಲ್ಲಿ ವಾಟ್ಸನ್ ಹೇಳಿದ್ದಾರೆ.
ಅಬುಧಾಬಿಯಲ್ಲಿ ರವಿವಾರ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಸಿಎಸ್‌ಕೆ ಆಡಿದ್ದ ಕೊನೆಯ ಲೀಗ್ ಪಂದ್ಯದ ವೇಳೆ ವಾಟ್ಸನ್ ನಿವೃತ್ತಿಯಾಗುವ ಸುಳಿವು ನೀಡಿದ್ದರು. ಆ ಪಂದ್ಯವನ್ನು ಚೆನ್ನೈ 9 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ವಾಟ್ಸನ್ ಈ ವರ್ಷದ ಐಪಿಎಲ್‌ನಲ್ಲಿ 29.90ರ ಸರಾಸರಿಯಲ್ಲಿ ಒಟ್ಟು 299 ರನ್ ಗಳಿಸಿದ್ದಾರೆ.
ವಾಟ್ಸನ್ ಎರಡು ವರ್ಷಗಳ ಹಿಂದೆ ಚೆನ್ನೈ ತಂಡಕ್ಕೆ ಸೇರಿದ್ದರು. 2015ರಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಗಿರುವ ವಾಟ್ಸನ್ 2018ರ ಐಪಿಎಲ್ ಫೈನಲ್‌ನಲ್ಲಿ ಶತಕ ಸಿಡಿಸಿ ಚೆನ್ನೈ ಮೂಲದ ಫ್ರಾಂಚೈಸಿ ಮೂರನೇ ಐಪಿಎಲ್ ಪ್ರಶಸ್ತಿ ಜಯಿಸಲು ಪ್ರಮುಖ ಪಾತ್ರವಹಿಸಿದ್ದರು. ಐಪಿಎಲ್‌ನಲ್ಲಿ ಪ್ರಮುಖ ಐಕಾನ್ ಆಟಗಾರನಾಗಿದ್ದ ವಾಟ್ಸನ್ 145 ಐಪಿಎಲ್ ಪಂದ್ಯಗಳಲ್ಲಿ 92 ವಿಕೆಟ್‌ಗಳನ್ನು ಕಬಳಿಸುವ ಜೊತೆಗೆ 3,874 ರನ್ ಗಳಿಸಿದ್ದರು. ಚೆನ್ನೈನಲ್ಲಿ ಆಡುವ ಮೊದಲು ಅವರು ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೂ ಆಡಿದ್ದರು. 2008ರಲ್ಲಿ ರಾಜಸ್ಥಾನ ಮೊದಲ ಆವೃತ್ತಿಯ ಐಪಿಎಲ್ ಪ್ರಶಸ್ತಿ ಗೆಲ್ಲಲು ವಾಟ್ಸನ್ ನಿರ್ಣಾಯಕ ಪಾತ್ರವಹಿಸಿದ್ದರು.







