ಮಂಗಳೂರಲ್ಲಿ ಹೊಗೆಮಂಜು ಕವಿದ ವಾತಾವರಣ!
ಪ್ರಕೃತಿಯ ಸೊಬಗಿನಾಟದಲ್ಲಿ ಫಾಗ್‌ನ ಮ್ಯಾಜಿಕ್

ಮಂಗಳೂರು, ನ.3: ಮಂಗಳೂರು ನಗರದಲ್ಲಿ ಸೋಮವಾರ ರಾತ್ರಿಯಿಂದಲೇ ಆರಂಭವಾದ ಹೊಗೆಮಂಜು ಮಂಗಳವಾರ ಮಧ್ಯಾಹ್ನದವರೆಗೂ ಮುಂದುವರಿದಿದೆ.
ಸಾಮಾನ್ಯವಾಗಿ ನವೆಂಬರ್‌ನಿಂದ ಜನವರಿ ತಿಂಗಳವರೆಗಿನ ಚಳಿಗಾಲದ ಅವಧಿಯಲ್ಲಿ ಮಂಜು ಉಂಟಾಗುತ್ತದೆ. ಇದಕ್ಕೆ ಕಾರಣ ಚಳಿಗಾಲದ ವೇಳೆ ವಾತಾವರಣದಲ್ಲಿ ಉಷ್ಣಾಂಶ ಕಡಿಮೆ ಇದ್ದು ರಾತ್ರಿ ವೇಳೆಯಲ್ಲಿ ಸಸ್ಯಗಳು ಹೆಚ್ಚಾದ ನೀರನ್ನು ಎಲೆಗಳ ಮೂಲಕ ಬಾಷ್ಪ ವಿಸರ್ಜನೆ ಮಾಡುತ್ತವೆ. ಆ ನೀರು ವಾತಾವರಣ ಸೇರಿ ಚಳಿಗಾಲದಲ್ಲಿ ಕಡಿಮೆ ಉಷ್ಣತೆ ಇರುವ ಕಾರಣ ಮಂಜಿನ ರೂಪವನ್ನು ಪಡೆಯುತ್ತವೆ ಎಂದು ಹವಾಮಾನ ತಜ್ಞ, ವಿಜ್ಞಾನಿ ಮಂಗಳೂರಿನ ಗವಾಸ್ಕರ್ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.
ಮಳೆ ಹಾಗೂ ಬೇಸಿಗೆ ಕಾಲದಲ್ಲಿ ಉಷ್ಣಾಂಶ ಅಧಿಕ ಇರುವ ಕಾರಣ ಆ ನೀರು ವಾತಾವರಣದ ಉಷ್ಣತೆಗೆ ಕರಗಿ ಇಬ್ಬನಿ ರೂಪವನ್ನು ಪಡೆಯುತ್ತವೆ. ಚಳಿಗಾಲದಲ್ಲಿಯೂ ಎಲ್ಲ ದಿನಗಳಲ್ಲಿಯೂ ಈ ಮಂಜು ಕಂಡುಬರುವುದಿಲ್ಲ. ವಾತಾವರಣದಲ್ಲಿ ಅತೀ ಕಡಿಮೆ ಉಷ್ಣಾಂಶ ಇದ್ದಾಗ ಮಾತ್ರ ಕಂಡುಬರುತ್ತದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಅರಬ್ಬಿ ಸಮುದ್ರದಲ್ಲಿ ವಾಯುಒತ್ತಡ ನಿರ್ಮಾಣವಾಗಿದೆ. ವಾತಾವರಣದಲ್ಲಿ ಗಾಳಿಯ ಪ್ರಮಾಣ ಶೂನ್ಯದಲ್ಲಿದ್ದರಿಂದ ಹೊಗೆಮಂಜು ಆವರಿಸಿದೆ. ಸೋಮವಾರ ತಡರಾತ್ರಿ ಸಾಧಾರಣ ಮಳೆ ಸುರಿದಿದ್ದು, ಇನ್ನು ಮೂರು ದಿನಗಳ ಕಾಲ ಇದೇರೀತಯ ವಾತಾವರಣ ಇರುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.







