ಭೀಮಾತೀರದಲ್ಲಿ ಮತ್ತೆ ಗುಂಡಿನ ಮೊರೆತ: ಮೃತರ ಸಂಖ್ಯೆ 2ಕ್ಕೇರಿಕೆ
ರೌಡಿ ಶೀಟರ್ ಮಹಾದೇವ ಸಾಹುಕಾರ ಭೈರಗೊಂಡರಿಗೆ ಗಂಭೀರ ಗಾಯ

ವಿಜಯಪುರ, ನ.3: ಭೀಮಾ ತೀರದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ. ಭೀಮಾ ತೀರದ ರೌಡಿ ಶೀಟರ್ ಮಹಾದೇವ ಸಾಹುಕಾರ ಭೈರಗೊಂಡ ಅವರ ಮೇಲೆ ಸೋಮವಾರ ಗುಂಡು ಹಾಗೂ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ.
ಘಟನೆಯಲ್ಲಿ ಬೈರಗೊಂಡರ ಅಂಗರಕ್ಷಕ ಬಾಬುರಾಮ ಮಾರುತಿ ಕಂಚನಾಳ (64) ಗುಂಡು ತಗುಲಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಗಂಭೀರ ಗಾಯಗೊಂಡಿದ್ದ ಭೈರಗೊಂಡರ ಕಾರು ಚಾಲಕ ಲಕ್ಷ್ಮಣ ದಿಂಡೋರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದಾರೆ.
ಘಟನಾ ಸ್ಥಳವಾದ ರಾಷ್ಟ್ರೀಯ ಹೆದ್ದಾರಿ ಕನ್ನಾಳ ಕ್ರಾಸ್‌ಗೆ ಮಂಗಳವಾರ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು, ಸಾಹುಕಾರ ಭೈರಗೊಂಡ ಹತ್ಯೆಗೆ ಸಂಚು ರೂಪಿಸಿ 15 ಯುವಕರ ತಂಡ ಸೋಮವಾರ ದಾಳಿ ನಡೆಸಿದ್ದಾರೆ. ಶೀಘ್ರವೇ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದರು.
ಆರೋಪಿಗಳು ಭೈರಗೊಂಡ ಇದ್ದ ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆಸಿ, ಬಳಿಕ ಗುಂಡಿನ ದಾಳಿ ನಡೆಸಿದ್ದಾರೆ. ನಂತರ ಪೆಟ್ರೋಲ್ ಬಾಂಬ್ ಸಹ ಎಸೆದಿದ್ದಾರೆ. ಆದರೆ, ಅದು ಸ್ಫೋಟಗೊಂಡಿಲ್ಲ. ಸದ್ಯ ಈ ಘಟನೆಯಲ್ಲಿ ಕಾರು ಚಾಲಕ ಮತ್ತು ಭೈರಗೊಂಡ ಅಂಗರಕ್ಷಕ ಸಾವನ್ನಪ್ಪಿದ್ದಾರೆ ಎಂದು ಐಜಿಪಿ ಸ್ಪಷ್ಟಪಡಿಸಿದ್ದಾರೆ.
ಭೈರಗೊಂಡ ಹತ್ಯೆ ಯತ್ನ ಇದೊಂದು ಸುಪಾರಿ ಹತ್ಯೆಯ ಯತ್ನವೋ ಅಥವಾ ಬೇರೆ ಉದ್ದೇಶವೋ ಎಂಬುದು ಶೀಘ್ರವೇ ಹೊರಬರಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭ ಜಿಲ್ಲಾ ಎಸ್ಪಿ ಅನುಪಮ್ ಅಗರವಾಲ್ ಜೊತೆಗಿದ್ದರು.
ಘಟನೆ ವಿವರ: ವಿಜಯಪುರ ನಗರದ ಹೊರವಲಯದ ಭೂತನಾಳ ಕ್ರಾಸ್ ಬಳಿ ಇರುವ ಹಣಮಂತ ಚಿಂಚಲಿ ಅವರ ಪೈಪ್ ಫ್ಯಾಕ್ಟರಿಗೆ ಮಹಾದೇವ ಸಾಹುಕಾರ ಭೈರಗೊಂಡ ಸೋಮವಾರ ಮಧ್ಯಾಹ್ನ ಭೇಟಿ ನೀಡಿ, ಅಲ್ಲಿಂದ ಚಡಚಣ ಕಡೆಗೆ ಹೊರಟಾಗ ಕನ್ನಾಳ ಕ್ರಾಸ್ ಹತ್ತಿರ ಅಪರಿಚಿತ ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆದಿತ್ತು.
ಟಿಪ್ಪರ್‌ನಿಂದ ಕಾರಿಗೆ ಢಿಕ್ಕಿ ಹೊಡೆದ ದುಷ್ಕರ್ಮಿಗಳು, ನಂತರ ಗುಂಡು ಹಾರಿಸಿದ್ದರೆನ್ನಲಾಗಿದೆ. ಘಟನೆಯಲ್ಲಿ ಬೈರಗೊಂಡರ ಅಂಗರಕ್ಷಕ ಬಾಬುರಾಮ ಮಾರುತಿ ಕಂಚನಾಳ (64) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಬೈರಗೊಂಡರ ಹೊಟ್ಟೆಯ ಭಾಗದಲ್ಲಿ ಎರಡು ಹಾಗೂ ಬೆನ್ನಿನ ಪಕ್ಕೆಲಬಿಗೆ ಒಂದು ಗುಂಡು ತಗಲಿದೆ.








