ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಗೆ ವ್ಯಾಪಕ ಖಂಡನೆ
ಮಂಗಳೂರು, ನ.3: ಉಳ್ಳಾಲ ಸಹಿತ ದೇಶದ ಹಲವು ಪ್ರದೇಶಗಳು ಪಾಕಿಸ್ತಾನವಾಗಿದೆ ಎಂದು ರವಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ ಆರೆಸ್ಸಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಅಲ್ಲದೆ ಈ ಹೇಳಿಕೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯಲ್ಲಿ ಕಾಲೆಳೆಯಲಾಗುತ್ತಿದೆ.
ಸಿಪಿಎಂ: ಮುಸ್ಲಿಂ ಸಮುದಾಯವನ್ನು ಅನುಮಾನಿಸುವಂಥ ಕೋಮುದ್ವೇಷ ಪ್ರಚೋದಕ ಮಾತುಗಳನ್ನು ಆಡಿರುವುದು ಖಂಡನೀಯ. ಮುಸ್ಲಿಮರು ಇತರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಪ್ರದೇಶದ ಜನರನ್ನು ಪಾಕಿಸ್ತಾನೀಯರೆಂದು ಸಂದೇಹಪಡುವ, ಆ ಮೂಲಕ ಆ ಜನರ ವಿರುದ್ಧ ಇತರರಲ್ಲಿ ಕೋಮುದ್ವೇಷ ಹುಟ್ಟಿಸುವ ದುರ್ವರ್ತನೆಯಾಗಿದೆ. ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ದೈವ-ದೇವಸ್ಥಾನಗಳಿಗೆ ಅಭದ್ರತೆ ಕಾಡಲಿದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಹಾಗಾಗಿ ಕಲ್ಲಡ್ಕ ಪ್ರಭಾಕರ ಭಟ್ ಈ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಸಿಪಿಎಂ ದ.ಕ.ಜಿಲ್ಲಾ ಸಮಿತಿಯ ಕಾರ್ಯದರ್ಶಿ ವಸಂತ ಆಚಾರಿ ಒತ್ತಾಯಿಸಿದ್ದಾರೆ.
ಡಿವೈಎಫ್‌ಐ: ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರದ ವೈಫಲ್ಯಗಳನ್ನು ಮುಚ್ಚಲು ಇಂತಹ ಹೇಳಿಕೆಯನ್ನು ನೀಡಲಾಗುತ್ತಿದೆ. ಇದು ಫ್ಯಾಸಿಸ್ಟ್ ಶಕ್ತಿಗಳು ಹಿಂದಿನಿಂದಲೂ ಅನುಸರಿಸಿಕೊಂಡು ಬಂದ ತಂತ್ರವಾಗಿದ್ದು ಅಭಿವೃದ್ಧಿಯ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲದಿದ್ದಾಗ ಧರ್ಮ ಸಂಘರ್ಷದ ಮಾತುಗಳನ್ನಾಡಿ ಜನರ ಗಮನ ಬೇರೆಡೆ ತಿರುಗಿಸುವ ತಂತ್ರವನ್ನು ಕಲ್ಲಡ್ಕ ಭಟ್ ನಿರ್ವಹಿಸಿದ್ದಾರೆ. ಉಳ್ಳಾಲ ತಾಲೂಕಿನಲ್ಲಿ ಕೋವಿಡ್ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳ ಲೂಟಿ ಮಿತಿಮೀರಿದೆ. ಅದೇ ರೀತಿ ಯುವಜನರ ನಿರುದ್ಯೋಗದ ಪ್ರಮಾಣದಲ್ಲೂ ಏರಿಕೆಯಾಗಿದೆ. ಇಂತಹ ನೈಜ ವಿಷಯಗಳ ಬಗ್ಗೆ ಮಾತನಾಡುವುದು ಬಿಟ್ಟು ಅಬ್ಬಕ್ಕ ಆಳಿದ ನಾಡನ್ನು ಪಾಕಿಸ್ತಾನ ಎಂದು ಕರೆಯುವ ಮೂಲಕ ತಾಲೂಕನ್ನು ಅವಮಾನಿಸಿರುವುದು ಖಂಡನೀಯ ಎಂದು ಡಿವೈಎಫ್‌ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ ಮತ್ತು ಕಾರ್ಯದರ್ಶಿ ಸುನಿಲ್ ತೇವುಲ ತಿಳಿಸಿದ್ದಾರೆ
ಕೆಟಿಎ ಯೂತ್ ಫೋರಂ: ವೀರ ರಾಣಿ ಅಬ್ಬಕ್ಕನ ನಾಡನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ್ದು ಅಕ್ಷಮ್ಯ. ಉಳ್ಳಾಲ ಎನ್ನುವಾಗ ಪಾಕಿಸ್ತಾನದ ನೆನಪು ಬರಲು ಸಾಧ್ಯವಿಲ್ಲ. ಉಳ್ಳಾಲ ಎನ್ನುವಾಗ ರಾಣಿ ಅಬ್ಬಕನ ಹೋರಾಟಗಳು ಮತ್ತು ಚೀರುಂಭ ಭಗವತಿ ಕ್ಷೇತ್ರ, ಸ್ಯೆಯದ್ ಮದನಿ ದರ್ಗಾ, ಸೈಂಟ್ ಸೆಬೆಸ್ಟಿನ್ ಚರ್ಚ್ ನೆನಪಿಗೆ ಬರುತ್ತದೆ. ಉಳ್ಳಾಲದ ಜನತೆ ಹಿಂದೂ ಮುಸ್ಲಿಂ ಕ್ರೈಸ್ತ ಎಂಬ ಭೇದವಿಲ್ಲದೆ ಶಾಂತಿ, ಸೌಹಾರ್ದ,ಸಹಬಾಳ್ವೆಯೊಂದಿಗೆ ಜಿವನ ನಡೆಸುತ್ತಿದ್ದಾರೆ. ಇಂತಹ ಸರ್ವ ಧರ್ಮೀಯರ ಶಾಂತಿಯ ನಾಡು ಉಳ್ಳಾಲ ಪಾಕಿಸ್ತಾನವಾಗಲು ಹೇಗೆ ಸಾಧ್ಯ ಎಂದು ಕೆಟಿಎ ಯೂತ್ ಫೋರಂ ಅಧ್ಯಕ್ಷ ಮೌಶೀರ್ ಅಹ್ಮದ್ ಸಾಮಣಿಗೆ ಪ್ರಶ್ನಿಸಿದ್ದಾರೆ.
ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟ: ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಸಿ ನೀಡಿದ ಹೇಳಿಕೆ ಖಂಡನೀಯ. ಮುಗ್ಧ ಜನರ ಮತೀಯ ಭಾವನೆಗಳನ್ನು ಪ್ರಚೋದಿಸುವ ಪ್ರಯತ್ನ ಇದಾಗಿದೆ. ಉಳ್ಳಾಲ ಜಿಲ್ಲೆಗೆ ಕೈಲಾಸವಿದ್ದಂತೆ. ಸೌಹಾರ್ದ ಸ್ಥಳಗಳ ಸಂಗಮ ಬೀಡು. ಇಂತಹ ಪ್ರದೇಶವನ್ನು ಪಾಕಿಸ್ತಾನ ಎಂದಿರುವುದು ಅವರ ವಯಸ್ಸಿನ ದೋಷಕ್ಕೆ ಸಾಕ್ಷಿಯಾಗಿದೆ, ಹಾಗಾಗಿ ಅವರು ಸಾರ್ವಜನಿಕ ಜೀವನದಿಂದ ನಿವೃತ್ತಿಗೊಳ್ಳುವುದು ಒಳಿತು ಎಂದು ಮಾಜಿ ಮೇಯರ್, ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ.
ಯುನಿವೆಫ್: ಉಳ್ಳಾಲವನ್ನು ಕಾಣುವಾಗ ಪಾಕಿಸ್ತಾನದಂತೆ ಕಾಣುತ್ತದೆ ಮಾತ್ರವಲ್ಲ ಉಳ್ಳಾಲ ಪಾಕಿಸ್ತಾನವಲ್ಲವೇ ಎಂದ ಕಲ್ಲಡ್ಕ ಪ್ರಭಾಕರ್ ಭಟ್ ಇವರ ಹೇಳಿಕೆಯನ್ನು 'ಯುನಿವೆಫ್ ಕರ್ನಾಟಕ' ತೀವ್ರವಾಗಿ ಖಂಡಿಸುತ್ತದೆ. ಇದು ಕಲ್ಮಶ ಮನಸ್ಸಿನ ವಿಕೃತ ಹೇಳಿಕೆಯಾಗಿದೆ. ಮುಸ್ಲಿಮ್ ಬಾಹುಳ್ಯ ಪ್ರದೇಶಗಳಲ್ಲಿ ಬದುಕುವ ಇತರ ಧರ್ಮೀಯರು ಎಂದೂ ಅಸುರಕ್ಷಿತರೆಂಬ ಭಾವನೆಯನ್ನು ಹೊಂದಿಲ್ಲ. ಮಾತ್ರವಲ್ಲ ಜಿಲ್ಲೆಯ ಬಹುತೇಕ ಇಂತಹ ಪ್ರದೇಶಗಳ ಜನರು ದಶಕಗಳಿಂದ ಶಾಂತಿಯನ್ನು ಕಾಪಾಡಿ ಧಾರ್ಮಿಕ ಮತ್ತು ಇತರ ಸ್ವಾತಂತ್ರ್ಯಗಳನ್ನು ಬಹಳ ಆನಂದದಿಂದ ಅನುಭವಿಸುತ್ತಿರುವಾಗ, ಇಂತಹ ಕೀಳ್ಮಟ್ಟದ ಹೇಳಿಕೆಗಳಿಂದ ಜನರನ್ನು ಧ್ರುವೀಕರಣಗೊಳಿಸಿ ಅದರಿಂದ ರಾಜಕೀಯ ಲಾಭ ಗಳಿಸುವುದೇ ಇದರ ಹಿಂದಿರುವ ದುರುದ್ದೇಶವಾಗಿದೆ ಎಂದು ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ತಿಳಿಸಿದ್ದಾರೆ.
ಈ ಹೇಳಿಕೆ ನೀಡಿರುವ ಪ್ರಭಾಕರ ಭಟ್ಟರ ಮೇಲೆ ಮತ್ತು ಇಂತಹ ಹೇಳಿಕೆಗಳನ್ನು ಸಮರ್ಥಿಸುತ್ತಿರುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.







