ಉಡುಪಿ ಜಿಲ್ಲೆಯಲ್ಲಿ ಹೊಸದಾಗಿ 20 ಕೊರೋನ ಪ್ರಕರಣ ದೃಢ
ಕೊರೋನ ನಿಯಂತ್ರಣದಲ್ಲಿ ಜಿಲ್ಲಾಡಳಿತಕ್ಕೆ ಯಶಸ್ಸು

ಉಡುಪಿ, ನ.3: ಜಿಲ್ಲೆಯಲ್ಲಿ ದೈನಂದಿನ ಕೋವಿಡ್ ಪಾಸಿಟಿವ್ ಬಂದವರ ಸಂಖ್ಯೆ ನಾಲ್ಕು ತಿಂಗಳಲ್ಲಿ ಮೊದಲ ಬಾರಿ 20ಕ್ಕಿಳಿದಿದ್ದರೆ, ಜು.18ರ ಬಳಿಕ ಒಟ್ಟಾರೆಯಾಗಿ ಜಿಲ್ಲೆಯಲ್ಲಿರುವ ಸಕ್ರಿಯ ಕೊರೋನ ಪಾಸಿಟಿವ್ ಇರುವವರ ಸಂಖ್ಯೆ ಪ್ರಥಮವಾಗಿ 500ಕ್ಕಿಂತ(463) ಕೆಳಗಿಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಮಂಗಳವಾರ ಜಿಲ್ಲೆಯಲ್ಲಿ ಪಾಸಿಟಿವ್ ಬಂದವರ ಸಂಖ್ಯೆ 20. ಇವರಲ್ಲಿ ಮಕ್ಕಳು ಸೇರಿದಂತೆ 12 ಮಂದಿ ಪುರುಷರು ಹಾಗೂ 8 ಮಂದಿ ಮಹಿಳೆಯ ರಾಗಿದ್ದಾರೆ. ಇವರಲ್ಲೂ 7 ಮಂದಿ ಪುರುಷರು ಹಾಗೂ ನಾಲ್ವರು ಮಹಿಳೆಯರಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಉಡುಪಿ ತಾಲೂಕಿನ 9, ಕುಂದಾಪುರ ತಾಲೂಕಿನ 9 ಹಾಗೂ ಕಾರ್ಕಳ ತಾಲೂಕಿನ ಇಬ್ಬರಲ್ಲಿ ಪಾಸಿಟಿವ್ ಕಂಡುಬಂದಿದೆ ಎಂದು ಡಾ.ಸೂಡ ಹೇಳಿದ್ದಾರೆ.
ದಿನದಲ್ಲಿ ಪಾಸಿಟಿವ್ ಬಂದ 20 ಮಂದಿಯಲ್ಲಿ ಆರು ಮಂದಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರೆ, ಉಳಿದ 14 ಮಂದಿ ತಮ್ಮ ತಮ್ಮ ಮನೆಗಳಲ್ಲೇ ಹೋಮ್ ಐಸೋಲೇಷನ್‌ನಲ್ಲಿದ್ದು ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ತಿಳಿಸಿದರು.
109 ಮಂದಿ ಗುಣಮುಖ: ಸೋಮವಾರ ಜಿಲ್ಲೆಯಲ್ಲಿ 109 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಸೋಂಕಿನಿಂದ ಮುಕ್ತರಾಗಿ ಮನೆಗೆ ತೆರಳಿದವರ ಒಟ್ಟು ಸಂಖ್ಯೆ ಸದ್ಯ 21,341 ಆಗಿದೆ. ಜಿಲ್ಲೆಯಲ್ಲಿ ಸದ್ಯ 463 ಮಂದಿ ಸಕ್ರಿಯ ಕೋವಿಡ್ ಸೋಂಕಿತರಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಮತ್ತು ಮನೆಗಳ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದವರು ವಿವರಿಸಿದರು.
1555 ನೆಗೆಟಿವ್: ಜಿಲ್ಲೆಯಲ್ಲಿ ಸೋಮವಾರ ಒಟ್ಟು 1576 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಇವರಲ್ಲಿ 1555 ಮಂದಿ ನೆಗೆಟಿವ್ ಬಂದಿದ್ದು, 21 (ಐಸಿಎಂಆರ್ ವರದಿ)ಮಂದಿ ಮಾತ್ರ ಪಾಸಿಟಿವ್ ಬಂದಿದ್ದಾರೆ. ಇದರಿಂದ ಜಿಲ್ಲೆಯ ಪಾಸಿಟಿವ್ ಪ್ರಮಾಣ ಇಂದು ಶೇ.1.33ರಲ್ಲಿದೆ. ಇದು ಕಳೆದ ಐದು ತಿಂಗಳಲ್ಲೇ ಬಂದ ಕನಿಷ್ಠ ಪ್ರಮಾಣವಾಗಿದೆ. ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 21,985 ಆಗಿದೆ.
ಜಿಲ್ಲೆಯಲ್ಲಿ ಸೋಮವಾರದವರೆಗೆ ಒಟ್ಟು 1,88,454 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 1,66,469 ಮಂದಿ ನೆಗೆಟಿವ್ ಹಾಗೂ 21,985 ಮಂದಿ ಪಾಸಿಟಿವ್ ಬಂದಿದ್ದಾರೆ. ಈಗಾಗಲೇ 21,341 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಒಟ್ಟು 183 ಮಂದಿ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ನಿನ್ನೆ ಮತ್ತು ಇಂದು ಯಾರೂ ಬಲಿಯಾಗಿಲ್ಲ. ಜಿಲ್ಲೆಯಲ್ಲಿ ಇದುವರೆಗೆ ಕೊರೋನಕ್ಕೆ ಬಲಿಯಾದವರ ಸಂಖ್ಯೆ 183 ಆಗಿದೆ.







