ರಾಜ್ಯಸಭೆ ಚುನಾವಣೆಗೆ ನಾಮಪತ್ರ ತಿರಸ್ಕಾರ: ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಪ್ರಕಾಶ್ ಬಜಾಜ್‌ಗೆ ಸುಪ್ರೀಂ ಸಲಹೆ

ಹೊಸದಿಲ್ಲಿ, ನ.3: ಉತ್ತರಪ್ರದೇಶದಿಂದ ರಾಜ್ಯಸಭೆಗೆ ನಡೆದ ಚುನಾವಣೆಗೆ ತಾನು ಸಲ್ಲಿಸಿದ್ದ ನಾಮಪತ್ರವನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ನ್ಯಾಯವಾದಿ ಪ್ರಕಾಶ್ ಬಜಾಜ್ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆಯಲು ಸುಪ್ರೀಂಕೋರ್ಟ್ ಅವಕಾಶ ನೀಡಿದೆ. ಅಲ್ಲದೆ ಈ ಬಗ್ಗೆ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದೆ.
ತಾನು ಎರಡು ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಿದ್ದರೂ, ಇದರಲ್ಲಿ ಒಂದನ್ನು ತೆಗೆಯಲಾಗಿದೆ. ಇನ್ನೊಂದು ನಾಮಪತ್ರದ ಬಗ್ಗೆ ಜುಜುಬಿ ಆಕ್ಷೇಪ ಮುಂದಿರಿಸಿ ತಿರಸ್ಕರಿಸಲಾಗಿದೆ. ಬಿಎಸ್‌ಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಪಿತೂರಿಯಲ್ಲಿ ಚುನಾವಣಾಧಿಕಾರಿಯೂ ಸೇರಿದ್ದಾರೆ. ಆದ್ದರಿಂದ ಚುನಾವಣಾ ಫಲಿತಾಂಶಕ್ಕೆ ತಡೆ ನೀಡಿ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಬಜಾಜ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ಪರಿಶೀಲನೆ ನಡೆಸಿದ ಮುಖ್ಯ ನ್ಯಾಯಾಧೀಶ ಎಸ್.ಎ. ಬೋಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್, ಈ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟನ್ನು ಸಂಪರ್ಕಿಸುವಂತೆ ತಿಳಿಸಿತು. ಅರ್ಜಿದಾರರ ಕೋರಿಕೆಯಂತೆ ಸುಪ್ರೀಂಕೋರ್ಟ್‌ನಿಂದ ಅರ್ಜಿ ಹಿಂಪಡೆಯಲು ಅವಕಾಶ ನೀಡಲಾಗಿದೆ ಎಂದು ಸುಪ್ರೀಂಕೋರ್ಟ್‌ನ ಆದೇಶದಲ್ಲಿ ತಿಳಿಸಲಾಗಿದೆ.





