7 ತಿಂಗಳಿನಿಂದ ಬಿಡುಗಡೆಯಾಗದ ಹಣ: ಪೌರ ಕಾರ್ಮಿಕರಿಂದ ಕಸ ಸಂಗ್ರಹ ನಿಲ್ಲಿಸುವ ಎಚ್ಚರಿಕೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ನ.3: ಪೌರ ಕಾರ್ಮಿಕರ ಗುತ್ತಿಗೆದಾರರಿಗೆ ಕಳೆದ ಏಳು ತಿಂಗಳಿನಿಂದ ಬಿಬಿಎಂಪಿಯಿಂದ ಹಣವೇ ಬಿಡುಗಡೆಯಾಗಿಲ್ಲ. ಹೀಗಾಗಿ, ನಾಳೆ(ನ.5)ಯಿಂದ ಪೌರ ಕಾರ್ಮಿಕರು ಕಸ ಸಂಗ್ರಹ ನಿಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಳೆದ 7 ತಿಂಗಳಿಂದ ಘನ ತ್ಯಾಜ್ಯ ನಿರ್ವಹಿಸುವ ಗುತ್ತಿಗೆದಾರರಿಗೆ ವೇತನ ಪಾವತಿ ಆಗಿಲ್ಲ. ಬಿಲ್ ಬಾಕಿ 360 ಕೋಟಿ ರೂ. ಹಾಗೆಯೇ ಉಳಿದು ಹೋಗಿದೆ ಎಂದು ಬಿಬಿಎಂಪಿ ಕಸ ನಿರ್ವಹಣೆ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲ ಸುಬ್ರಹ್ಮಣ್ಯಂ ತಿಳಿಸಿದ್ದಾರೆ.
ನಗರದಲ್ಲಿ ಕಸ ನಿರ್ವಹಿಸುವ ಗುತ್ತಿಗೆದಾರರ ಜೊತೆಗೆ 1,200 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 7 ತಿಂಗಳಿಂದ ಈ ಕಾರ್ಮಿಕರಿಗೆ ಗುತ್ತಿಗೆದಾರರೇ ತಮ್ಮ ಜೇಬಿನಿಂದ ಹಣ ಕೊಡುತ್ತಿದ್ದಾರೆ. ಇದೀಗ ಗುತ್ತಿಗೆದಾರರು ಉಳಿಸಿಟ್ಟಿದ್ದ ಹಣವೂ ಖಾಲಿಯಾಗಿದೆ. ಈ 7 ತಿಂಗಳಲ್ಲಿ ಗುತ್ತಿಗೆದಾರರು ಬಿಬಿಎಂಪಿಗೆ ಪ್ರತಿದಿನವೂ ರೌಂಡ್ಸ್ ಹಾಕಿದ್ದಾರೆ. ದಸರಾ ಸಂದರ್ಭದಲ್ಲೇ ಕಸ ಎತ್ತದಿರಲು ಗುತ್ತಿಗೆದಾರರು ನಿರ್ಧರಿಸಿದ್ದರು. ಆದರೆ, ಹಬ್ಬದ ವೇಳೆ ಹಾಗೆ ಮಾಡುವುದು ಬೇಡ ಎಂದು ಮಾನವೀಯತೆ ಆಧಾರದ ಮೇಲೆ ತಮ್ಮ ಕಾರ್ಯ ಮುಂದುವರಿಸಿದ್ದಾರೆ. ಬಿಬಿಎಂಪಿ ಕೂಡಾ ಹಬ್ಬದ ವೇಳೆಗೆ ಹಣ ನೀಡುವ ಭರವಸೆ ನೀಡಿತ್ತು. ಇದೀಗ ನಿರೀಕ್ಷೆ ಹುಸಿಯಾಗಿದೆ. ಎಷ್ಟು ದಿನ ನಾವು ನಮ್ಮ ಕೈನಿಂದ ಪೌರ ಕಾರ್ಮಿಕರಿಗೆ ಸಂಬಳ ನೀಡಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ ಗುತ್ತಿಗೆದಾರರು.
ಹೀಗಾಗಿ, ನವೆಂಬರ್ 5 ರಿಂದ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವುದನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ಒಂದು ವೇಳೆ ಆ ನಿರ್ಧಾರ ಕೈಗೊಂಡರೆ, ನಗರಾದ್ಯಂತ ಬ್ಲಾಕ್ ಸ್ಪಾಟ್ಗಳ ಸಂಖ್ಯೆ ಏರಿಕೆ ಆಗಲಿದೆ.





