ಪರಿಷತ್ ಚುನಾವಣೆಯ ಮತ ಎಣಿಕೆ ಮುಂದೂಡಿಕೆ ಪ್ರಶ್ನಿಸಿ ಪಿಐಎಲ್: ಚು.ಆಯೋಗಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ನ.3: ವಿಧಾನ ಪರಿಷತ್ತಿಗೆ ನಡೆದ ಶಿಕ್ಷಕ-ಪದವೀಧರ ಕ್ಷೇತ್ರಗಳ ಚುನಾವಣೆಯ ಮತ ಎಣಿಕೆಯನ್ನು ಮುಂದೂಡಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗಗಳಿಗೆ ನೋಟಿಸ್ ಜಾರಿ ಮಾಡಿದೆ.
ಕಳೆದ ಅಕ್ಟೋಬರ್ 28ರಂದು ನಡೆದ ಪರಿಷತ್ ಚುನಾವಣೆಯ ಮತ ಎಣಿಕೆಯನ್ನು ಮುಂದೂಡಿರುವ ಕೇಂದ್ರ ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ ನ್ಯೂಸ್ ಇಂಡಿಯಾ ವೋಟರ್ಸ್ ಪೋರಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಗಳು, ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ರಿಟರ್ನಿಂಗ್ ಆಫೀಸರ್ ಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿತು.
ಅರ್ಜಿದಾರರ ಕೋರಿಕೆ ಏನು: ರಾಜ್ಯ ಚುನಾವಣಾ ಆಯೋಗದ ಪತ್ರ ಆಧರಿಸಿ ಕೇಂದ್ರ ಚುನಾವಣಾ ಆಯೋಗ ಅ.31 ರಂದು ಆದೇಶ ಹೊರಡಿಸಿ ನ.2ರಂದು ನಡೆಯಬೇಕಿದ್ದ ಮತ ಎಣಿಕೆಯನ್ನು ನ.10ಕ್ಕೆ ಮುಂದೂಡಿದೆ. ಚುನಾವಣೆಗೆ ಒಮ್ಮೆ ದಿನಾಂಕಗಳನ್ನು ಘೋಷಿಸಿದ ಬಳಿಕ ಅವನ್ನು ಬದಲಾಯಿಸುವಂತಿಲ್ಲ. ಬದಲಾಯಿಸುವುದಾದರೆ ಚುನಾವಣಾ ನಡವಳಿಕೆ ನಿಯಮಗಳು-1961 ಹಾಗೂ ಜನಪ್ರತಿನಿಧಿಗಳ ಕಾಯ್ದೆ 1951ರ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ಸೂಚನೆ ಕೊಟ್ಟು ಕ್ರಮ ಕೈಗೊಳ್ಳಬೇಕು.
ಆದರೆ, ಆಯೋಗ ಏಕಾಏಕಿ ಬದಲಾವಣೆ ಮಾಡಿದೆ. ಕೇಂದ್ರ ಹಾಗೂ ರಾಜ್ಯಗಳಲ್ಲಿ ಒಂದೇ ರಾಜಕೀಯ ಪಕ್ಷ ಅಧಿಕಾರದಲ್ಲಿದ್ದು ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಆಯೋಗ ಅ.31ರಂದು ಹೊರಡಿಸಿರುವ ಆದೇಶ ರದ್ದುಪಡಿಸಿ ಶೀಘ್ರವೇ ಮತ ಎಣಿಕೆ ನಡೆಸುವಂತೆ ನಿರ್ದೇಶಿಸಬೇಕು. ಎಣಿಕೆ ನಡೆಸುವವರೆಗೆ ಮತ ಪೆಟ್ಟಿಗೆಗಳನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಕರಣದ ಹಿನ್ನೆಲೆ: ವಿಧಾನ ಪರಿಷತ್ತಿನ 2 ಶಿಕ್ಷಕರು ಹಾಗೂ 2 ಪದವೀಧರರ ಕ್ಷೇತ್ರಗಳ ಚುನಾಯಿತ ಸದಸ್ಯರ ಅವಧಿ ಜೂನ್ 30ಕ್ಕೆ ಕೊನೆಗೊಂಡಿತ್ತು. ಈ ನಾಲ್ಕು ಕ್ಷೇತ್ರಗಳಿಗೆ ಕೊರೋನ ಕಾರಣಕ್ಕಾಗಿ ಮುಂದೂಡಿದ್ದ ಚುನಾವಣೆಯನ್ನು ನಡೆಸಲು ಚುನಾವಣಾ ಆಯೋಗ ಅ.1ರಂದು ಅಧಿಸೂಚನೆ ಹೊರಡಿಸಿತ್ತು. ನಿಗದಿತ ವೇಳಾಪಟ್ಟಿಯಂತೆ ಕ್ಷೇತ್ರಗಳಿಗೆ 28ರಂದು ಚುನಾವಣೆ ನಡೆದು, ನ.2ರಂದು ಮತ ಎಣಿಕೆ ಮಾಡಬೇಕಿತ್ತು. ಹಾಗೆಯೇ ಚುನಾವಣಾ ಪ್ರಕ್ರಿಯೆಯನ್ನು ನ.5ರೊಳಗೆ ಪೂರ್ಣಗೊಳಿಸಬೇಕಿತ್ತು. ಆದರೆ, ಕೇಂದ್ರ ಚುನಾವಣಾ ಆಯೋಗ ಅ.31 ರಂದು ಆದೇಶ ಹೊರಡಿಸಿ ಮತ ಎಣಿಕೆ 10ರಂದು ನಡೆಸಿ, 13ರ ಒಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಿದೆ.







