ಸಾಮಾಜಿಕ, ಆರ್ಥಿಕ ಕಾರಣವೊಡ್ಡಿ ಹೆಣ್ಣು ಶಿಶುಗಳ ತ್ಯಜಿಸುವಿಕೆಯಲ್ಲಿ ಹೆಚ್ಚಳ
2012ರಿಂದ 2020ರವರೆಗೆ 185 ನವಜಾತ ಶಿಶುಗಳ ರಕ್ಷಣೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ನ.3: ಸಾಮಾಜಿಕ ಮತ್ತು ಆರ್ಥಿಕ ಕಾರಣಗಳನ್ನೊಡ್ಡಿ ಪೋಷಕರು ಹೆಣ್ಣು ಶಿಶುಗಳನ್ನು ತ್ಯಜಿಸುತ್ತಿದ್ದು, ಈ ಕಾರಣದಿಂದಲೇ ಎಲ್ಲೆಂದರಲ್ಲಿ ಬಹುತೇಕ ನವಜಾತ ಹೆಣ್ಣು ಶಿಶುಗಳು ಪತ್ತೆಯಾಗುತ್ತಿವೆ. ಸರಕಾರ ಕೂಡ ಅಂತಹ ಮಕ್ಕಳನ್ನು ರಕ್ಷಣೆ ಮಾಡಿ ಬೆಳೆಸುತ್ತಿವೆ.
ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಶಿಶುಮರಣ ಪ್ರಮಾಣ ತಗ್ಗಿದೆ. ಆದರೆ, ಕೊರೋನ ಬಂದ ಮೇಲೆ ಶಿಶುಮರಣ ಪ್ರಮಾಣ ಹೆಚ್ಚಾಗಿದ್ದು, ನಿಗದಿತ ದಿನದಂದು ಗರ್ಭಿಣಿಯರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದಿರುವುದು, ಪೌಷ್ಠಿಕ ಆಹಾರ ಸೇವಿಸದಿರುವುದು, ಮಾಹಿತಿ ಕೊರತೆಯಿಂದ ಮರಣ ಪ್ರಮಾಣದ ಸಂಖ್ಯೆ ಹೆಚ್ಚಾಗಿರುವುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
2012 ರಿಂದ 2020ರವರೆಗೆ ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ 185 ನವಜಾತ ಶಿಶುಗಳ ರಕ್ಷಣೆ ಮಾಡಲಾಗಿದೆ. ಅದರಲ್ಲಿ 120 ನವಜಾತ ಹೆಣ್ಣು ಶಿಶುಗಳಿವೆ. ಒಟ್ಟು 185 ನವಜಾತ ಶಿಶುಗಳಲ್ಲಿ 140 ಶಿಶುಗಳನ್ನು ಅವರ ಅವಲಂಬಿತರಿಗೆ ನೀಡಲಾಗಿದ್ದು, ಉಳಿದ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶಿಶುಗೃಹದಲ್ಲಿಟ್ಟು ಪೋಷಣೆ ಮಾಡಲಾಗುತ್ತಿದೆ.
ಇದರ ಜೊತೆಗೆ ನವಜಾತ ಶಿಶುಗಳ ಹತ್ಯೆ ಪ್ರಕರಣವೂ ಕೂಡ ರಾಜ್ಯದಲ್ಲಿ ಜಾಸ್ತಿಯಾಗುತ್ತಿದೆ. ಅಂತಹ ವಿಶೇಷ ಪ್ರಕರಣಗಳನ್ನು ಪತ್ತೆ ಹಚ್ಚುವ ಸಲುವಾಗಿಯೇ ವಿಶೇಷ ಪೊಲೀಸ್ ತಂಡ ಕಾರ್ಯ ನಿರ್ವಹಿಸುತ್ತದೆ. ಆದರೆ ಬಳ್ಳಾರಿಯಲ್ಲಿ ಯಾವುದೇ ಅಂತಹ ಪ್ರಕರಣಗಳು ದಾಖಲಾಗಿಲ್ಲ.
ಭಾರತೀಯ ದಂಡ ಸಂಹಿತೆ 317 ರ ಪ್ರಕಾರ ಮಗುವನ್ನು ಹೀಗೆ ಎಸೆದು ಅಥವಾ ಬಿಟ್ಟು ಹೋಗುವುದು ಶಿಕ್ಷಾರ್ಹ ಅಪರಾಧ. ಕೆಲವೆಡೆ ಪೋಷಕರಿಂದ ದೂರವಾಗುವ ಮಕ್ಕಳು ಮುಂದೆ ಏನಾದರು ಎಂಬ ಮಾಹಿತಿಯೇ ಇರುವುದಿಲ್ಲ. ಯಾವುದೇ ಮಗುವಿನ ಬದುಕು ಬರಡಾಗಬಾರದು ಎಂಬ ಆಶಯದೊಂದಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಇಂದು ಅನೇಕ ಸಂಘ ಸಂಸ್ಥೆಗಳು ಮಾಡುತ್ತಿವೆ.







