ಅಝೀಮ್ ಪ್ರೇಮ್ ಜಿ ಪ್ರತಿಷ್ಠಾನದಿಂದ ಕೊರೋನ ನಿರ್ವಹಣೆಗೆ ನೆರವು: ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು, ನ.3: ಕೊರೋನ ನಿರ್ವಹಣೆ ವ್ಯವಸ್ಥೆಗೆ ಅಝೀಮ್ ಪ್ರೇಮ್ ಜಿ ಪ್ರತಿಷ್ಠಾನವು ಅಗತ್ಯ ನೆರವುಗಳನ್ನು ನೀಡಿದ್ದು, ಇದಕ್ಕಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಭಿನಂದನೆ ಸಲ್ಲಿಸಿದ್ದಾರೆ.
ಕೊರೋನ ನಿರ್ವಹಣೆಗೆ ಸರಕಾರ ಮಾತ್ರವಲ್ಲದೆ, ಸಂಘ, ಸಂಸ್ಥೆಗಳ ನೆರವು ಕೂಡ ಅಗತ್ಯವಿದೆ. ಸಚಿವ ಡಾ.ಕೆ.ಸುಧಾಕರ್ ನಿರಂತರವಾಗಿ ಸಂಘ, ಸಂಸ್ಥೆಗಳ ಸಂಪರ್ಕದಲ್ಲಿದ್ದು, ಕೋವಿಡ್ ನಿರ್ವಹಣೆಯಲ್ಲಿ ಸಂಸ್ಥೆಗಳು ಕೂಡ ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ.
ಬೆಂಗಳೂರಿನ ಬ್ರಾಡ್ ವೇ ರಸ್ತೆಯ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗಲು ಕೆಲ ಸಂಸ್ಥೆಗಳ ನೆರವು ಪಡೆದಿದ್ದಾರೆ. ಅಝೀಮ್ ಪ್ರೇಮ್ ಜಿ ಪ್ರತಿಷ್ಠಾನ ಡಾಕ್ಟರ್ಸ್ ಫಾರ್ ಯು ಹೆಸರಿನ ತಂಡದ ಸಿಬ್ಬಂದಿಯನ್ನು ಆಸ್ಪತ್ರೆಗೆ ನೀಡಿದೆ ಎಂದು ಸುಧಾಕರ್ ತಿಳಿಸಿದ್ದಾರೆ.
ಈ ಪ್ರತಿಷ್ಠಾನವು, 5 ಲಿಕ್ವಿಡ್ ಹ್ಯಾಡ್ಲಿಂಗ್ ಸಿಸ್ಟಮ್‍ಗಳನ್ನು ಬಿಎಂಸಿಆರ್ ಐ, ನಿಮ್ಹಾನ್ಸ್, ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ ಮತ್ತು ರಾಷ್ಟ್ರೀಯ ವೈರಾಲಜಿ ಸಂಸ್ಥೆಗಳಿಗೆ ನೀಡಿದೆ. 3 ಆರ್‍ಟಿಪಿಸಿಆರ್ ಯಂತ್ರ, 4 ಆರ್‍ಎನ್‍ಎ ಯಂತ್ರಗಳನ್ನು ಬಿಎಂಸಿಆರ್‍ಐ, ಬೌರಿಂಗ್, ಲೇಡಿ ಕರ್ಜನ್ ಸಂಸ್ಥೆಗಳಿಗೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪೂರ್ವ ವಲಯಕ್ಕೆ 800, ಮಹದೇವಪುರಕ್ಕೆ 500, ಬೊಮ್ಮನಹಳ್ಳಿಗೆ 800 ಮತ್ತು ದಾಸರಹಳ್ಳಿಗೆ 655 ಸೇರಿ ಒಟ್ಟು 4,755 ಪಲ್ಸ್ ಆಕ್ಸಿಮೀಟರ್ ಗಳನ್ನು ಅಝೀಮ್ ಪ್ರೇಮ್ ಜಿ ಫೌಂಡೇಶನ್ ನೀಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







