ಗ್ರಾಮೀಣ ಐಟಿ ಕ್ವಿಝ್: ಉಡುಪಿ ಕಾಲೇಜಿಗೆ ರಾಜ್ಯಮಟ್ಟದ ಪ್ರಶಸ್ತಿ

ಮಂಗಳೂರು, ನ.3: ಟಿಸಿಎಸ್ ಮತ್ತು ರಾಜ್ಯ ಸರಕಾರದ ಇಲೆಕ್ಟ್ರಾನಿಕ್ಸ್, ಐಟಿ-ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳ ಸಂಯುಕ್ತವಾಗಿ ವರ್ಚ್ಯುವಲ್ ವಿಧಾನದ ಮೂಲಕ ಆಯೋಜಿಸಿದ್ದ ಪ್ರಸಕ್ತ ವರ್ಷದ ಗ್ರಾಮೀಣ ಐಟಿ ಕ್ವಿಜ್‌ನಲ್ಲಿ ಉಡುಪಿಯ ಪೂರ್ಣಪ್ರಜ್ಞ ಪಿಯು ಕಾಲೇಜಿನ ಸುಹಾಸ್ ಯು. ಶೆಣೈ ರಾಜ್ಯಮಟ್ಟದ ಫೈನಲ್ ಪ್ರಶಸ್ತಿ ಗೆದ್ದಿದ್ದಾರೆ. ಉಡುಪಿ ವಿದ್ಯೋದಯ ಪಿಯು ಕಾಲೇಜಿನ ಸಾತ್ವಿಕ್ ಕುಮಾರ್ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದಾರೆ.
ವಿಜೇತರು 10 ಸಾವಿರ ಮೌಲ್ಯದ ಗಿಫ್ಟ್‌ವೋಚರ್ ಗೆದ್ದಿದ್ದು, ರನ್ನರಪ್ 7000 ರೂ. ಮೌಲ್ಯದ ವೋಚರ್ ಗೆದ್ದಿದ್ದಾರೆ.
ಟಿಸಿಎಸ್ ಗ್ರಾಮೀಣ ಕ್ವಿಜ್ 2020ರ ಆವೃತ್ತಿಯಲ್ಲಿ ಆರು ಪ್ರಾದೇಶಿಕ ಸುತ್ತುಗಳು ಗುಜರಾತ್, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಕರ್ನಾಟಕದಲ್ಲಿ ನಡೆದಿವೆ. ಆರೂ ಸುತ್ತುಗಳ ವಿಜೇತರು ರಾಷ್ಟ್ರಮಟ್ಟದ ಫೈನಲ್ಸ್‌ನಲ್ಲಿ ಭಾಗವಹಿಸಲಿದ್ದು, 2020ರ ಬೆಂಗಳೂರು ತಂತ್ರಜ್ಞಾನ ಶೃಂಗದ ಅಂಗವಾಗಿ ನವೆಂಬರ್‌ನಲ್ಲಿ ಸ್ಪರ್ಧೆ ನಡೆಯಲಿದೆ. ರಾಷ್ಟ್ರಮಟ್ಟದ ಸ್ಪರ್ಧೆಯ ವಿಜೇತರಿಗೆ ಒಂದು ಲಕ್ಷ ರೂ. ಶೈಕ್ಷಣಿಕ ಸ್ಕಾಲರ್‌ಶಿಪ್ ಮತ್ತು ರನ್ನರ್ ಅಪ್‌ಗಳಿಗೆ 50 ಸಾವಿರ ರೂ. ಮೌಲ್ಯದ ಶೈಕ್ಷಣಿಕ ಸ್ಕಾಲರ್‌ಶಿಪ್ ದೊರೆಯಲಿದೆ.
ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದು, ಎಂಟರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರಾಜ್ಯಮಟ್ಟದ ಅಂತಿಮ ಸ್ಪರ್ಧೆಯನ್ನು ವರ್ಚುವಲ್ ವಿಧಾನದ ಮೂಲಕ ನಡೆಸಲಾಗಿತ್ತು. ಬೈಟ್ ಅಬಂಡನ್ಸ್, ಟೆಕ್ ವಿಷನ್, ಟೆಕ್ ಕ್ಲೌಡ್, ಟೆಕ್ ಅಜೈಲ್ ಮತ್ತು ಟೆಕ್ ಎಕೋಸಿಸ್ಟಂ ಎಂಬ ಐದು ವಿಭಾಗಗಳಲ್ಲಿ ಸ್ಪರ್ಧೆ ನಡೆದಿತ್ತು. ಇದುವರೆಗೆ ಈ ಕಾರ್ಯಕ್ರಮವು 1.80 ಕೋಟಿ ವಿದ್ಯಾರ್ಥಿಗಳನ್ನು ತಲುಪಿದೆ ಎಂದು ಪ್ರಕಟನೆ ತಿಳಿಸಿದೆ.







