ಸರಕಾರಿ ಕಾರ್ಯಕ್ರಮ ಪೂರ್ಣ ಅನುಷ್ಟಾನವಾಗಲಿ: ಎಸ್‌ಟಿಪಿ, ಟಿಎಸ್‌ಪಿ ಸಭೆಯಲ್ಲಿ ನಿರ್ದೇಶಕಿ ಊರ್ಮಿಳಾ ಸೂಚನೆ

ಮಂಗಳೂರು, ನ.3: ಎಸ್‌ಟಿಪಿ ಹಾಗೂ ಟಿಎಸ್‌ಪಿ ಯೋಜನೆಗಳ ಕಾರ್ಯಕ್ರಮಗಳನ್ನು ಶೇ.100ರಷ್ಟು ಅನುಷ್ಟಾನವಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಎಸ್‌ಟಿಪಿ, ಟಿಎಸ್‌ಪಿ ಕೋಶದ ನಿರ್ದೇಶಕಿ ಊರ್ಮಿಳಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಪಂ ಮಿನಿ ಸಭಾಂಗಣದಲ್ಲಿ ಮಂಗಳವಾರ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಅನುಷ್ಟಾನಗೊಳಿಸುತ್ತಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರ ಅನುಸೂಚಿತ ಜಾತಿ ಹಾಗೂ ಪಂಗಡಗಳ ಅಭಿವೃದ್ಧಿಗೆ ಅನೇಕ ಕಲ್ಯಾಣ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ರಾಜ್ಯದ ಯೋಜನ ವೆಚ್ಚದ ಭಾಗವೊಂದನ್ನು ಮೀಸಲಿಟ್ಟಿದೆ. ಇವುಗಳ ಸಂಪೂರ್ಣ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು.
ಎಸ್‌ಟಿಪಿ ಮತ್ತು ಟಿಎಸ್‌ಪಿ ಯೋಜನೆಗಳನ್ನು ಅನುಷ್ಟಾನಗೊಳಿಸುವಾಗ ಜನಸಂಖ್ಯೆಯ ಪ್ರಮಾಣಕ್ಕೆ ಅನುಸಾರವಾಗಿ ಶೇ.50ರಷ್ಟು ಯೋಜನೆಗಳನ್ನು ಪ.ಜಾತಿ, ಪ.ಪಂಗಡದವರು ವಾಸಿಸುತ್ತಿರುವ ಕಾಲೋನಿಗಳಲ್ಲಿ ಅನುಷ್ಟಾನಗೊಳಿಸಬೇಕು. ಸರಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ರ್ಯಕ್ರಮಗಳನ್ನು ತಕ್ಷಣವೇ ಮಾಡಬೇಕು ಎಂದರು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಜಂಟಿ ನಿರ್ದೇಶಕ ಜಿ.ಸಂತೋಷ್‌ಕುಮಾರ್, ಸಮಾಜ ಕಲ್ಯಾಣಾಧಿಕಾರಿ ಯೋಗಿಶ್ ಎಸ್.ಪಿ., ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ಅನಿತಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







