ಬಿಹಾರ ವಿಧಾನ ಸಭೆ ಚುನಾವಣೆಯಲ್ಲಿ ಹಲವು ಎಡವಟ್ಟುಗಳು; ಹಲವರ ಹೆಸರು ಮೃತ ಮತದಾರರ ಪಟ್ಟಿಯಲ್ಲಿ !

ಪಾಟ್ನಾ, ನ. 3: ಬಿಹಾರ ವಿಧಾನ ಸಭೆಯ 94 ಕ್ಷೇತ್ರಗಳಿಗೆ ಮಂಗಳವಾರ ನಡೆದ ಎರಡನೇ ಹಂತದ ಮತದಾನದ ಸಂದರ್ಭ ಪಾಟ್ನಾದ ಹಲವು ಕ್ಷೇತ್ರಗಳಲ್ಲಿ ಮತದಾರರು ಮತದಾನ ನಡೆಸಲು ತೊಂದರೆ ಅನುಭವಿಸಬೇಕಾಯಿತು. ಹಲವರು ಮತ ಚೀಟಿ ಇಲ್ಲದೆ ಮತದಾನದಿಂದ ವಂಚಿತರಾದರು. ಕೆಲವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಗಾಗಿ ಹುಡುಕಾಡಿದರು.
ಆದರೆ, ಅಂತಿಮವಾಗಿ ಅವರ ಹೆಸರು ಮೃತ ಮತದಾರರ ಪಟ್ಟಿಯಲ್ಲಿತ್ತು. ಕೆಲವರ ಮತ ಚೀಟಿಯಲ್ಲಿ ಲಿಂಗತ್ವ ಬದಲಾಗಿತ್ತು. ಇನ್ನು ಕೆಲವರ ಸಂಬಂಧಗಳು ಬದಲಾಗಿದ್ದವು. ಯಾರದೋ ತಂದೆಯನ್ನು ಯಾರದೋ ಪತಿ ಎಂದು ದಾಖಲಿಸಲಾಗಿತ್ತು. ಕೆಲವರ ಮತ ಚೀಟಿಯ ಫೋಟೊಗಳು ಬದಲಾಗಿದ್ದವು. ತನ್ನ ತಾಯಿಯ ಹೆಸರು ಮೃತ ಮತದಾರರ ಪಟ್ಟಿಯಲ್ಲಿ ಇದ್ದುದು ನೋಡಿ ಅಚ್ಚರಿ ಉಂಟಾಯಿತು ಎಂದು ಕುಮ್ಹಾರರ್ ಕ್ಷೇತ್ರದ ಮತದಾರ ಶಂಭು ನಾಥ್ ಝಾ ಹೇಳಿದ್ದಾರೆ. ‘‘ನನ್ನ ತಾಯಿ ಬದುಕಿದ್ದಾರೆ. ಈಗಲೂ ಕ್ರಿಯಾಶೀಲರಾಗಿದ್ದಾರೆ. ನಾನು ಅವರ ಮತ ಚೀಟಿ ಪಡೆದುಕೊಂಡಿರಲಿಲ್ಲ. ನಾನು ಈ ಬಗ್ಗೆ ವಿಚಾರಣೆ ನಡೆಸಿದೆ. ಅಚ್ಚರಿ ಎಂಬಂತೆ ನನ್ನ ತಾಯಿಯ ಹೆಸರು ಮೃತಪಟ್ಟ ಮತದಾರರ ಪಟ್ಟಿಯಲ್ಲಿ ಇತ್ತು’’ ಎಂದು ಶಂಭುನಾಥ್ ಝಾ ಹೇಳಿದ್ದಾರೆ. ಕುತೂಹಲಕಾರಿ ವಿಚಾರ ಎಂದರೆ, ನನ್ನ ನೆರೆಯ ವ್ಯಕ್ತಿಯ ತಂದೆ ತೀರಿಕೊಂಡಿದ್ದಾರೆ.
ಆದರೆ, ಅವರು ತಂದೆಯ ಮತ ಚೀಟಿಯನ್ನು ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಕುಮ್ಹಾರರ್ ವಿಧಾನ ಸಭಾ ಕ್ಷೇತ್ರದ ಕಂಕಾರ್‌ಬಂಗ್‌ನ ಮತದಾರ ಪ್ರವೀಣ್ ಕುಮಾರ್, ಮತದಾರರ ಪಟ್ಟಿಯಲ್ಲಿ ನನ್ನ ಲಿಂಗತ್ವ ಬದಲಾಗಿದೆ. ನನ್ನ ಫೋಟೊದ ಬದಲು ಮಹಿಳೆಯ ಫೋಟೊ ಮುದ್ರಿಸಲಾಗಿದೆ ಎಂದಿದ್ದಾರೆ. ತನ್ನ ಮತದಾನದ ಚೀಟಿಯಲ್ಲಿ ತನ್ನ ತಂದೆಯನ್ನು ತನ್ನ ಪತಿ ಎಂದು ದಾಖಲಿಸಲಾಗಿದೆ ಎಂದು ಬಂಕಿಪುರ ಕ್ಷೇತ್ರದ ಕದಮ್ ಕುವಾನ್‌ನ ಮತದಾರೆ ರೇಖಾ ಹೇಳಿದ್ದಾರೆ. ಈ ಬಾರಿ ಮತದಾನದ ಚೀಟಿಯಲ್ಲಿ ಹಲವು ಲೋಪಗಳು ಕಂಡು ಬಂದಿದ್ದು, ಹಲವರಿಗೆ ಮತದಾನ ಮಾಡಲು ಸಾಧ್ಯವಾಗಿಲ್ಲ ಎಂದು ರಾಜೇಂದ್ರ ನಗರದ ಮತದಾರ ರಮೇಶ್ ಶುಕ್ಲಾ ಹೇಳಿದ್ದಾರೆ.







