ಮಲಬಾರ್ ನೌಕಾ ಕವಾಯತು ಆರಂಭ
ಭಾರತ, ಅಮೆರಿಕ ಸಹಿತ 4 ರಾಷ್ಟ್ರಗಳು ಭಾಗಿ
ಹೊಸದಿಲ್ಲಿ, ನ.3: ಅಮೆರಿಕ, ಜಪಾನ್ ದೇಶಗಳೊಂದಿಗೆ ಭಾರತ ಪ್ರತೀ ವರ್ಷ ಜಂಟಿಯಾಗಿ ನಡೆಸುವ ಮಲಬಾರ್ ನೌಕಾ ಕವಾಯತ್‌ಗೆ ಈ ವರ್ಷ ಆಸ್ಟ್ರೇಲಿಯಾವನ್ನೂ ಸೇರ್ಪಡೆಗೊಳಿಸಿದ್ದು ಮಂಗಳವಾರ ಬಂಗಾಳ ಕೊಲ್ಲಿಯಲ್ಲಿ ಪ್ರಥಮ ಹಂತಕ್ಕೆ ಚಾಲನೆ ದೊರಕಿದೆ. ಇದು ನವೆಂಬರ್ 6ರವರೆಗೆ ನಡೆಯಲಿದೆ ಎಂದು ಭಾರತದ ರಕ್ಷಣಾ ಇಲಾಖೆ ಹೇಳಿದೆ.
ಒಂದು ಸಬ್‌ಮರೀನ್ ಸಹಿತ ಭಾರತೀಯ ನೌಕಾಪಡೆಯ ಐದು ಹಡಗುಗಳು ನೌಕಾ ಕವಾಯತ್‌ನಲ್ಲಿ ಭಾಗವಹಿಸಿದ್ದರೆ ಅಮೆರಿಕದ ಜಾನ್ ಎಸ್ ಮಕೈನ್ ಕ್ಷಿಪಣಿ ನಾಶಕ ಹಡಗು, ಆಸ್ಟ್ರೇಲಿಯಾದ ಬಲ್ಲಾರತ್ ಕಾವಲು ಹಡಗು, ಜಪಾನ್‌ನ ಯುದ್ಧನೌಕೆ ಕವಾಯತ್‌ನಲ್ಲಿ ಪಾಲ್ಗೊಂಡಿದೆ. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿಯ ಕವಾಯತ್ ಸಂದರ್ಭ ನಾಲ್ಕು ರಾಷ್ಟ್ರಗಳ ರಕ್ಷಣಾ ಸಿಬ್ಬಂದಿಗಳ ಮಧ್ಯೆ ಯಾವುದೇ ಸಭೆ ನಡೆಯುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ತಿಂಗಳ ಅಂತ್ಯದಲ್ಲಿ ನಡೆಯುವ ದ್ವಿತೀಯ ಹಂತದ ಕವಾಯತ್‌ನಲ್ಲಿ ಭಾರತ ಮತ್ತು ಅಮೆರಿಕದ ಯುದ್ಧವಿಮಾನಗಳನ್ನೂ ನಿಯೋಜಿಸಲಾಗುವುದು. ನಾಲ್ಕು ಮಿತ್ರರಾಷ್ಟ್ರಗಳ ನೌಕಾಪಡೆಗಳ ನಡುವಿನ ಸಹಕ್ರಿಯತೆ ಮತ್ತು ಸಮನ್ವಯತೆಯನ್ನು ಇದು ಪ್ರದರ್ಶಿಸಲಿದೆ. ಇಂಡೋ-ಪೆಸಿಫಿಕ್ ವಲಯವನ್ನು ಮುಕ್ತ ಹಾಗೂ ಅಂತರ್ಗತಗೊಳಿಸುವ ಹಾಗೂ ನಿಯಮ ಆಧಾರಿತ ಅಂತರ್ ರಾಷ್ಟ್ರೀಯ ಕ್ರಮಕ್ಕೆ ಈ ನಾಲ್ಕು ರಾಷ್ಟ್ರಗಳ ಬದ್ಧತೆಯನ್ನು ಈ ನೌಕಾ ಪಡೆಗಳ ಅಭ್ಯಾಸ ಸ್ಪಷ್ಟಪಡಿಸಲಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.
ಆತಿಥೇಯ ಭಾರತ ಮತ್ತು ಚೀನಾದ ನಡುವೆ ಗಡಿವಿವಾದದ ಬಿಕ್ಕಟ್ಟಿನ ಸಂದರ್ಭದಲ್ಲೇ ಈ ಕವಾಯತು ನಡೆಯುತ್ತಿರುವುದು ಗಮನಾರ್ಹವಾಗಿದೆ. ಅಮೆರಿಕವು ತನ್ನ ಮಿತ್ರರೊಂದಿಗಿನ ಒಕ್ಕೂಟದ ಮೂಲಕ ಶೀತಲ ಸಮರ ಮನೋಭಾವವನ್ನು ಮುಂದುವರಿಸಿದೆ ಎಂದು ಚೀನಾ ಟೀಕಿಸಿದೆ. ಜಂಟಿ ಕವಾಯತ್‌ನಲ್ಲಿ ಭಾಗವಹಿಸಿರುವ ಆಸ್ಟ್ರೇಲಿಯಾ ಮತ್ತು ಜಪಾನ್‌ಗಳೂ ಚೀನಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿಲ್ಲ.







