ಬಿಇ ಆರ್ಕಿಟೆಕ್ಚರ್: ಸಿಇಟಿ ರ‍್ಯಾಂಕ್ ಪಟ್ಟಿಗೆ ತಡೆ
ಬೆಂಗಳೂರು, ನ.3: ಸಾಮಾನ್ಯ ಪ್ರವೇಶ ಪರೀಕ್ಷೆಯ ಪ್ರಸಕ್ತ ಸಾಲಿನ ಬಿಇ ಆರ್ಕಿಟೆಕ್ಚರ್ ಪ್ರವೇಶಾತಿಗೆ ಸಂಬಂಧಿಸಿದಂತೆ ಅ.30ರಂದು ಪ್ರಕಟಿಸಲಾಗಿದ್ದ ರ‍್ಯಾಂಕ್ ಪಟ್ಟಿಯನ್ನು ವಿದ್ಯಾರ್ಥಿಗಳ ಮನವಿ ಮೇರೆಗೆ ತಡೆಹಿಡಿಯಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಪ್ರಾಧಿಕಾರ ಪ್ರಕಟಿಸಿರುವ ರ್ಯಾಂಕ್ ಪಟ್ಟಿಯನ್ನು ವಿದ್ಯಾರ್ಥಿಯ ದ್ವಿತೀಯ ಪಿಯುಸಿಯಲ್ಲಿ ಗಳಿಸಿರುವ ಒಟ್ಟಾರೆಯ ಶೇ.50ರಷ್ಟು ಹಾಗೂ ಜೆಇಇ/ನಾಟಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಅಂಕಗಳಲ್ಲಿ ಯಾವುದರಲ್ಲಿ ಹೆಚ್ಚು ಅಂಕ ಗಳಿಸಿರುತ್ತಾರೆಯೊ ಅದರ ಶೇ.50ರಷ್ಟನ್ನು ಸೇರಿಸಿ ರ‍್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗಿತ್ತು.
ಪ್ರಸಕ್ತ ಸಾಲಿನಲ್ಲಿ ಜೆಇಇ ಪರೀಕ್ಷೆಯ ಫಲಿತಾಂಶದ ಎನ್‍ಟಿಎ ಸ್ಕೋರನ್ನು ಪರ್ಸಂಟೇಜ್ ಮಾದರಿಯಲ್ಲಿ ನೀಡಿದೆ. ಹಾಗೂ ಅದರ ಆಧಾರದಲ್ಲಿ ರ‍್ಯಾಂಕ್ ಪಟ್ಟಿಯನ್ನು ಕೆಇಎ ಪ್ರಕಟಿಸಿರುವುದರಿಂದ ರ‍್ಯಾಂಕ್ಗಳಲ್ಲಿ ವ್ಯತ್ಯಾಸವಾಗಿದೆ ಎಂದು ಹೆಚ್ಚಿನ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸದರಿ ಫಲಿತಾಂಶವನ್ನು ಮರು ಪರಿಶೀಲಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿರುವುದರಿಂದ ಅ.30ರಂದು ಪ್ರಕಟಿಸಲಾಗಿದ್ದ ಬಿಇ ಆರ್ಕಿಟೆಕ್ಚರ್ ಪ್ರವೇಶಾತಿ ರ್ಯಾಂಕ್ ಪಟ್ಟಿಯನ್ನು ತಡೆಹಿಡಿಯಲಾಗಿದೆ. ಹಾಗೂ ಸಂಬಂಧಪಟ್ಟ ಸಂಸ್ಥೆಗಳಿಂದ ಸ್ಪಷ್ಟೀಕರಣ ಪಡೆದು ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಪ್ರಾಧಿಕಾರ ಪ್ರಕಟನೆಯಲ್ಲಿ ತಿಳಿಸಿದೆ.
ಪ್ರಸಕ್ತ ಸಾಲಿನ ಬಿಇ ಆರ್ಕಿಟೆಕ್ಚರ್ ಕೋರ್ಸ್ ಪ್ರವೇಶಾತಿಗೆ ಕೆಇಎ ಪ್ರಕಟಿಸಿದ ರ್ಯಾಂಕ್ ಪಟ್ಟಿ ಗೊಂದಲದ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಎಲ್ಲ ವಿದ್ಯಾರ್ಥಿಗಳ ಹಿತರಕ್ಷಣೆಯನ್ನು ಗಮನದಲ್ಲಿಟ್ಟು ಮುಂದಿನ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
-ಅಶ್ವತ್ಥ ನಾರಾಯಣ, ಉನ್ನತ ಶಿಕ್ಷಣ ಸಚಿವ







