ಮೈಸೂರು: ಏಶ್ಯನ್ ಪೇಂಟ್ಸ್ ಕಾರ್ಖಾನೆ ವಿರುದ್ಧ ರೈತರ ಪ್ರತಿಭಟನೆ

ಮೈಸೂರು,ನ.3: ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದ ರೈತರ ಮಕ್ಕಳಿಗೆ ಏಶ್ಯನ್ ಪೇಂಟ್ಸ್ ಕಾರ್ಖಾನೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಅತಿ ಕಡಿಮೆ ದರದಲ್ಲಿ ಭೂಮಿ ಪಡೆದುಕೊಂಡು ಬಳಿಕ ಉದ್ಯೋಗವನ್ನೇ ನೀಡಿಲ್ಲ, ಬೇರೆ, ಬೇರೆ ಕಡೆಯವರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿದ್ದು, ಸ್ಥಳಿಯರನ್ನು ಕಡೆಗಣಿಸಲಾಗಿದೆ ಈ ಕುರಿತು ಜಿಲ್ಲಾಡಳಿತದ ಗಮನಕ್ಕೆ ತಂದರೂ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿ ರೈತ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರಿರುವ ಉದ್ಯಾನವನದಲ್ಲಿ ಮಂಗಳವಾರ ರೈತ ಮುಖಂಡ ಹೊಸಕೋಟೆ ಬಸವರಾಜು ನೇತೃತ್ವದಲ್ಲಿ ಜಮಾಯಿಸಿದ ರೈತರು ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿನ ರೈತರು ಏಷ್ಯನ್ ಪೇಂಟ್ಸ್‌ಗೆ ಭೂಮಿ ಮಾರಿದ್ದು, ರೈತರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. ಕಾರ್ಖಾನೆ ಆರಂಭಿಸಲು 175 ಎಕರೆ ಖರೀದಿ ಮಾಡಲಾಗಿತ್ತು. ಕಾರ್ಖಾನೆ ಆರಂಭವಾದ ಬಳಿಕ ಉದ್ಯೋಗ ನೀಡಲು ನಿರಾಕರಿಸಿದೆ. ರೈತರ ಮಕ್ಕಳು ಹಾಗೂ ಸ್ಥಳೀಯ ಯುವಕ, ಯುವತಿಯರಿಗೆ ಉದ್ಯೋಗ ನೀಡದೆ ವಂಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಉದ್ಯೋಗ ನೀಡುವಂತೆ ಸೂಚನೆ ನೀಡಿತ್ತು. ಜಿಲ್ಲಾಡಳಿತದ ಸೂಚನೆಗೂ ಕಾರ್ಖಾನೆ ಕಿಮ್ಮತ್ತು ನೀಡುತ್ತಿಲ್ಲ. ಕಾರ್ಖಾನೆಯ ಧೋರಣೆ ಖಂಡಿಸಿ ರೈತ ಸಂಘದ ವತಿಯಿಂದ ನಾವೆಲ್ಲ ರೈತರು ಹೋರಾಟ ನಡೆಸುತ್ತಲೇ ಇದ್ದೇವೆ. ಆದರೆ ಏನೂ ಪ್ರಯೋಜನವಾಗುತ್ತಿಲ್ಲ. ಗ್ರಾಮದ ರೈತರಿಗೆ ಖಾಯಂ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಅತಿ ಕಡಿಮೆ ದರದಲ್ಲಿ ಭೂಮಿ ಪಡೆದುಕೊಂಡ ಏಶ್ಯನ್ ಪೇಂಟ್ಸ್ ಈಗ ರೈತರಿಗೆ ಸಾಕಷ್ಟು ವಿದ್ಯಾಭ್ಯಾಸ ಇಲ್ಲ ಎಂದು ಅತಿ ಕೆಳ ದರ್ಜೆಯ ಕೆಲಸ ನೀಡುವುದು ಅಥವಾ ಉದ್ಯೋಗವನ್ನೇ ನೀಡದಿರುವುದನ್ನು ನಾವು ವಿರೋಧಿಸುತ್ತೇವೆ ಎಂದರು.
ಈ ಕುರಿತು ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ಆದರೆ ಕ್ರಮ ಕೈಗೊಳ್ಳುತ್ತಿಲ್ಲ, ಕಂಪೆನಿಗೆ ಮುತ್ತಿಗೆ ಹಾಕುತ್ತೇವೆ. ರೈತರಿಗೆ ಏನಾದರೂ ತೊಂದರೆ ಆದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆ ಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿ ವೆಂಕಟರಾಜು, ಕಾರ್ಮಿಕ ಅಧಿಕಾರಿಗಳು ಮತ್ತು ಕಾರ್ಖಾನೆಯ ಮುಖ್ಯಸ್ಥರ ಸಭೆ ಕರೆದಿದ್ದು, ಅವರೊಂದಿಗೆ ಮಾತನಾಡಿ ನಿಮ್ಮ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಜಿಲ್ಲಾಧಿಕಾರಿ ಕಚೇರಿ ಒಳಗೆ ಸಭೆ ನಡೆಸಿದರು. ಸಂಜೆಯವರೆಗೂ ಯಾವುದೇ ಕ್ರಮ ಕೈಗೊಂಡ ಬಗ್ಗೆ ಮಾಹಿತಿ ಲಭ್ಯವಾಗಲಿಲ್ಲ.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹೊಸಕೋಟೆ ಬಸವರಾಜು, ಬೊಕ್ಕಳ್ಳಿ ನಂಜುಂಡಸ್ವಾಮಿ, ಸ್ವರಾಜ್ ಇಂಡಿಯಾದ ಉಗ್ರ ನರಸಿಂಹೇಗೌಡ, ಕಾರ್ಮಿಕ ಮುಖಂಡ ಚಂದ್ರಶೇಖರ ಮೇಟಿ ಹಾಗೂ ಮತ್ತಿತರರು ಭಾಗವಹಿಸಿದ್ದರು.







