ಪ್ರಗತಿಪರ ‘ಸ್ಕ್ವಾಡ್’ ತಂಡದ ಎಲ್ಲ ನಾಲ್ವರು ಸದಸ್ಯೆಯರು ಮರು ಆಯ್ಕೆ

ಇಲ್ಹಾನ್ ಉಮರ್
ನ್ಯೂಯಾರ್ಕ್, ನ. 4: ನ್ಯೂಯಾರ್ಕ್ನ ಪ್ರಗತಿಪರ ಸಂಸದೆ ಅಲೆಕ್ಸಾಂಡ್ರಿಯಾ ಒಕಾಶಿಯೊ- ಕಾರ್ಟಿಝ್ ಸೇರಿದಂತೆ ಪ್ರಗತಿಪರ ‘ಸ್ಕ್ವಾಡ್’ ತಂಡದ ಎಲ್ಲ ನಾಲ್ವರು ಸದಸ್ಯೆಯರು ಡೆಮಾಕ್ರಟಿಕ್ ಪಕ್ಷದಿಂದ ಮಂಗಳವಾರ ಸುಲಭ ವಿಜಯ ಸಾಧಿಸಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ಗೆ ಮರುಪ್ರವೇಶಿಸಿದ್ದಾರೆ.
ಅಲೆಕ್ಸಾಂಡ್ರಿಯಾ ಜೊತೆಗೆ ಸಂಸತ್ಗೆ ಮರುಪ್ರವೇಶಿಸಲಿರುವ ಮಹಿಳೆಯರೆಂದರೆ- ಮಿನಸೊಟದ ಇಲ್ಹಾನ್ ಉಮರ್, ಮ್ಯಾಸಚೂಸಿಟ್ಸ್ನ ಅಯನ್ನಾ ಪ್ರೆಸ್ಲಿ ಮತ್ತು ಮಿಶಿಗನ್ನ ರಶೀದಾ ತ್ಲೈಬ್. ಅವರೆಲ್ಲರೂ ತಮ್ಮ ರಿಪಬ್ಲಿಕ್ ಪಕ್ಷದ ಎದುರಾಳಿಗಳನ್ನು ಸುಲಭವಾಗಿ ಸೋಲಿಸಿದರು.
31 ವರ್ಷದ ಅಲೆಕ್ಸಾಂಡ್ರಿಯಾ ತನ್ನ ಎದುರಾಳಿ 60 ವರ್ಷದ ಜಾನ್ ಕಮಿಂಗ್ಸ್ರನ್ನು ಸುಲಭವಾಗಿ ಸೋಲಿಸಿದರು.
65 ಶೇಕಡ ಮತ ಎಣಿಕೆ ಮುಗಿಯುವಾಗ, ಅಲೆಕ್ಸಾಂಡ್ರಿಯಾ 38 ಶೇಕಡ ಮತಗಳ ಅಂತರದಿಂದ ಮುಂದಿದ್ದರು.
ಬಿಳಿಯರಲ್ಲದ ಈ ನಾಲ್ವರು ನಾಯಕಿಯರು ಪರಿಸರ ಸಂರಕ್ಷಣೆ, ಎಲ್ಲ ಅಮೆರಿಕನ್ನರಿಗೆ ಆರೋಗ್ಯ ರಕ್ಷೆ ಮುಂತಾದ ಪ್ರಗತಿಪರ ವಿಚಾರಗಳಿಗಾಗಿ ಹೋರಾಡಿದವರು. ಅದಕ್ಕಾಗಿಯೇ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ರಿಂದ ನಿರಂತರವಾಗಿ ಜನಾಂಗೀಯ ನಿಂದನೆ ಮತ್ತು ಅಪಹಾಸ್ಯಕ್ಕೆ ಗುರಿಯಾದವರು.
ತಮ್ಮ ದಿಟ್ಟ ನಿಲುವುಗಳಿಗಾಗಿ ಅವರು ‘ಸ್ಕ್ವಾಡ್’ (ಅಪರಾಧಿಗಳ ಮೇಲೆ ದಾಳಿ ನಡೆಸುವ ತಂಡ) ಎಂಬುದಾಗಿ ಗುರುತಿಸಲ್ಪಟ್ಟಿದ್ದರು.
‘ಇಸ್ಲಾಮಾಫೋಬ್’ ಕಡು ಬಲಪಂಥೀಯ ಮಹಿಳೆಗೆ ಸೋಲು
ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಫ್ಲೋರಿಡವನ್ನು ಪ್ರತಿನಿಧಿಸಲು ಸ್ಪರ್ಧಿಸಿರುವ ಕಡು ಬಲಪಂಥೀಯ ಮಹಿಳೆ ಲಾರಾ ಲೂಮರ್ ಪರಾಭವಗೊಂಡಿದ್ದಾರೆ.
27 ವರ್ಷದ ಸ್ವಯಂಘೋಷಿತ ‘ಇಸ್ಲಾಮಾಫೋಬ್’ ಲಾರಾರನ್ನು ಡೆಮಾಕ್ರಟಿಕ್ ಪಕ್ಷದ ಲೂಯಿಸ್ ಫ್ರಾಂಕೆಲ್ 20 ಶೇಕಡ ಮತಗಳ ಅಂತರದಿಂದ ಸೋಲಿಸಿದರು.
ಮುಸ್ಲಿಮ್ ವಿರೋಧಿ ಭಾಷಣಗಳಿಗಾಗಿ ಲಾರಾರನ್ನು ಬಹುತೇಕ ಎಲ್ಲ ಸಾಮಾಜಿಕ ಮಾಧ್ಯಮಗಳಿಂದ ಬಹಿಷ್ಕರಿಸಲಾಗಿತ್ತು.
ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಗಸ್ಟ್ನಲ್ಲಿ ರಿಪಬ್ಲಿಕನ್ ಪಕ್ಷದ ಟಿಕೆಟ್ ನೀಡಲಾಗಿತ್ತು.







