ಮಿಲಿಟರಿ ಅಧಿಕಾರಿಗಳ ಹೆಸರು ಬಳಸಿ ವಂಚನೆ: ನಾಲ್ವರ ಬಂಧನ

ಬೆಂಗಳೂರು, ನ.4: ಪೊಲೀಸ್ ಮತ್ತು ಮಿಲಿಟರಿ ಅಧಿಕಾರಿಗಳ ಹೆಸರನ್ನು ಬಳಸಿಕೊಂಡು ಆನ್‍ಲೈನ್ ಮಾರಾಟ ಆಪ್ ಮೂಲಕ ವಂಚನೆ ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ವಝೀದ್ ಖಾನ್, ಸಾಹೀಲ್, ಸಹೀದ್, ಉಮೇರ್ ಖಾನ್ ಎಂಬುವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮತ್ತು ಮಿಲಿಟರಿ ಅಧಿಕಾರಿಗಳ ಹೆಸರಿನಲ್ಲಿ ಒಎಲ್‍ಎಕ್ಸ್ ನಲ್ಲಿ ನಕಲಿ ಐಡಿ ಹಾಗೂ ದಾಖಲೆಗಳನ್ನು ನೀಡಿ, ನಮಗೆ ಕೆಲಸದ ನಿಮಿತ್ತ ಬೇರೆ ಕಡೆ ವರ್ಗಾವಣೆಯಾಗಿದೆ. ನಮ್ಮ ಕಾರು, ಮನೆಯ ವಸ್ತುಗಳು ಮಾರಾಟಕ್ಕಿವೆ ಎಂದು ಮೊದಲು ಜಾಹೀರಾತು ಹಾಕುತ್ತಿದ್ದರು. ತದನಂತರ, ಖರೀದಿಗಾಗಿ ಮುಂದಾಗುತ್ತಿದ್ದ ಗ್ರಾಹಕರನ್ನು ಗುರಿಯಾಗಿಸಿಕೊಂಡು ಹಣ ಪಡೆದು ವಸ್ತುಗಳನ್ನು ನೀಡದೇ ವಂಚಿಸುತ್ತಿದ್ದರು. ಆರೋಪಿಗಳು ಹೈದರಾಬಾದ್‍ನಲ್ಲಿ ಕೂಡ ಇದೇ ರೀತಿ ಕೃತ್ಯ ಮಾಡಿದ ಕಾರಣ ಕೆಲ ದಿನಗಳ ಹಿಂದೆ ಬಂಧನ ಮಾಡಲಾಗಿತ್ತು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಕರ್ನಾಟಕದಲ್ಲಿಯೂ ಆರೋಪಿಗಳು ವಂಚಿಸಿರುವ ಮಾಹಿತಿ ಮೇರೆಗೆ ನಾಲ್ವರನ್ ಹೈದರಾಬಾದ್ ಜೈಲಿನಿಂದ ಬಾಡಿವಾರೆಂಟ್ ಮೂಲಕ ಕಸ್ಟಡಿಗೆ ಪಡೆಯಲಾಗಿದೆ. ಈ ವೇಳೆ ಆರೋಪಿಗಳ 20 ಪ್ರಕರಣಗಳು ಬಯಲಿಗೆ ಬಂದಿವೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.





