ರಾಜ್ಯದಲ್ಲೂ ನಿಷೇಧವಾಗಲಿದೆಯೇ ಪಟಾಕಿ ?: ಆರೋಗ್ಯ ಸಚಿವ ಸುಧಾಕರ್ ಹೇಳಿದ್ದು ಹೀಗೆ...

ಬೆಂಗಳೂರು, ನ. 4: ಕೊರೋನ ವೈರಸ್ ಸೋಂಕಿತರಿಗೆ ಹೆಚ್ಚಿನ ಸಮಸ್ಯೆ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಬಾರಿಯ ದೀಪಾವಳಿಗೆ ಪಟಾಕಿ ಸಿಡಿಸುವುದನ್ನು ನಿಷೇಧಿಸುವ ಸಂಬಂಧ ರಾಜ್ಯ ಸರಕಾರ ಚಿಂತನೆ ನಡೆಸಿದ್ದು, ಈ ಸಂಬಂಧ ತಜ್ಞರ ವರದಿಗೆ ಸೂಚನೆ ನೀಡಿದ್ದು, ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧಿಸುವ ಸಂಬಂಧ ರಾಜ್ಯ ಸರಕಾರ ಚಿಂತನೆ ನಡೆಸುತ್ತಿದೆಯೇ ಹೊರತು ಈ ನಿಟ್ಟಿನಲ್ಲಿ ಯಾವುದೇ ಅಧಿಕೃತ ನಿರ್ಧಾರವನ್ನು ಇನ್ನೂ ಕೈಗೊಂಡಿಲ್ಲ. ಆದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕೃತ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ರಾಜಸ್ಥಾನ ರಾಜ್ಯದಲ್ಲಿ ಈಗಾಗಲೇ ಪಟಾಕಿ ನಿಷೇಧ ಮಾಡಿ ಸರಕಾರ ಆದೇಶ ಹೊರಡಿಸಿದೆ. ಹೊಸದಿಲ್ಲಿ ಸರಕಾರ ಕಡಿಮೆ ಮಾಲಿನ್ಯವನ್ನುಂಟು ಮಾಡುವ ಪಟಾಕಿಗಳನ್ನಷ್ಟೇ ಉಪಯೋಗಿಸಲು ಅವಕಾಶ ಕಲ್ಪಿಸಿದೆ. ಅದೇ ರೀತಿಯಲ್ಲಿ ರಾಜ್ಯ ಸರಕಾರವು ಗಂಭೀರವಾಗಿ ಆಲೋಚನೆ ನಡೆಸಿದೆ ಎಂದ ಅವರು, ಪಟಾಕಿ ಸಿಡಿಸುವುದು ಹೋಂ ಐಸೋಲೇಷನ್‍ನಲ್ಲಿರುವ ಕೋವಿಡ್ ಸೋಂಕಿತರಿಗೆ ಆರೋಗ್ಯ ಸಮಸ್ಯೆ ಸೃಷ್ಟಿಸಲಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ ಎಂದರು.







