ಕಾಫಿ ಡೇ ಸಿದ್ದಾರ್ಥ ಪತ್ನಿ ಮಾಳವಿಕ ಸೇರಿ 6 ಮಂದಿ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್

ಚಿಕ್ಕಮಗಳೂರು, ನ.4: ಎಬಿಸಿ, ಕಾಫಿ ಡೇ ಸಂಸ್ಥೆಗಳ ಮಾಲಕರಾಗಿದ್ದ ಸಿದ್ದಾರ್ಥ ಹೆಗಡೆ ಅವರ ಪತ್ನಿ ಮಾಳವಿಕ ಹೆಗಡೆ ಅವರಿಗೆ ಸಂಕಷ್ಟ ಎದುರಾಗಿದ್ದು, ಮಾಳವಿಕ ಸೇರಿದಂತೆ ಸಂಸ್ಥೆಯ 6 ಮಂದಿ ವಿರುದ್ಧ ಮೂಡಿಗೆರೆ ಜೆಎಂಎಫ್‍ಸಿ ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ.
ಜಿಲ್ಲೆಯ ನೂರಾರು ಕಾಫಿ ಬೆಳೆಗಾರರು ಕಾಫಿ ಡೇ ಕಂಪೆನಿಗೆ ಮಾರಾಟ ಮಾಡಿದ ಕಾಫಿಗೆ ಹಣ ಪಾವತಿ ಮಾಡದ ಹಾಗೂ ಕಂಪೆನಿ ನೀಡಿದ ಚೆಕ್ ಬೌನ್ಸ್ ಪ್ರಕರಣ ಸಂಬಂದ ನ್ಯಾಯಾಲಯವು ಸಿದ್ದಾರ್ಥ ಹೆಗಡೆ ಪತ್ನಿ ಹಾಗೂ ಎಬಿಸಿ ಸಂಸ್ಥೆಯ ನಿರ್ದೇಶಕಿ ಮಾಳವಿಕ ಸೇರಿದಂತೆ ಸಂಸ್ಥೆಯ 6 ಮಂದಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದೆ.
ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಗ್ರಾಮದ ಶಿವಪ್ರಕಾಶ್ ಎಸ್ಟೇಟ್ ಮಾಲಕ ಕೆ.ನಂದೀಶ್ ಎಂಬವರು 'ಎಬಿಸಿ ಕಂಪೆನಿ ತಮ್ಮ ಕಾಫಿಯನ್ನು ಮಾರಾಟ ಮಾಡಿದ್ದು, ಇದರ ಬಾಬ್ತು ಸುಮಾರು 45 ಲಕ್ಷ ರೂ. ಪೈಕಿ 4 ಲಕ್ಷ ರೂ.ನಷ್ಟು ಹಣವನ್ನು ಕಂಪೆನಿ ನೀಡಿದೆ. ಬಾಕಿ ಹಣಕ್ಕೆ ಕಂಪೆನಿಯು ಚೆಕ್‍ಗಳನ್ನು ನೀಡಿದ್ದು, ಈ ಚೆಕ್‍ಗಳು ಬೌನ್ಸ್ ಆಗಿವೆ' ಎಂದು ಆರೋಪಿಸಿ ಎಬಿಸಿ ಹಾಗೂ ಕಾಫಿ ಡೇ ಸಂಸ್ಥೆಗಳ ನಿರ್ದೇಶಕಿಯಾಗಿರುವ ಸಿದ್ದಾರ್ಥ ಹೆಗಡೆ ಪತ್ನಿ ಹಾಗೂ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಮಗಳಾಗಿರುವ ಮಾಳವಿಕ ಸೇರಿದಂತೆ ಸಂಸ್ಥೆಯ 6 ಮಂದಿ ವಿರುದ್ಧ ಹಾಗೂ ಎಬಿಸಿ, ಕಾಫಿ ಡೇ ಸಂಸ್ಥೆಗಳ ವಿರುದ್ಧವೂ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮೂಡಿಗೆರೆ ಜೆಎಂಎಫ್‍ಸಿ ನ್ಯಾಯಾಲಯ ಸದ್ಯ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಕಂಪೆನಿಯ ಸಿಇಒ ಆಗಿರುವ ಮಾಳವಿಕ, ನಿರ್ದೇಶಕ ಜಯರಾಜ್ ಸಿ.ಹುಬ್ಳಿ, ಸೆಕ್ರೆಟರಿ ಸದಾನಂದ ಪೂಜಾರಿ ಹಾಗೂ ಕಂಪೆನಿ ಮುಖ್ಯಸ್ಥರಾದ ನಿತಿನ್ ಬಾಗಮನೆ, ಕಿಟೀಟಿ ಸಾವಂತ್, ಜಾವಿದ್ ಫರ್ವೇಜ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ.
ಜಿಲ್ಲೆಯ ಮುನ್ನೂರಕ್ಕೂ ಹೆಚ್ಚು ಕಾಫಿ ಬೆಳೆಗಾರರು ಕಾಫಿ ಡೇ ಹಾಗೂ ಎಬಿಸಿ ಕಂಪೆನಿಗೆ ತಾವು ಬೆಳೆದ ಕಾಫಿಯನ್ನು ಮಾರಾಟ ಮಾಡಿದ್ದು, ಈ ಕಾಫಿ ಖರೀದಿಸಿರುವ ಸಂಸ್ಥೆಗಳು ಬೆಳೆಗಾರರಿಗೆ ಮುಂಗಡ ಪಾವತಿ ಮಾಡಿ, ಬಾಕಿ ಹಣಕ್ಕೆ ಚೆಕ್ ನೀಡಿದ್ದವು. ಈ ಚೆಕ್‍ಗಳು ಬೌನ್ಸ್ ಆಗಿದ್ದರಿಂದ ಬೆಳೆಗಾರರು ಬಾಕಿ ಹಣ ಪಾವತಿಗೆ ಸಿದ್ದಾರ್ಥ ಹೆಗಡೆ ಪತ್ನಿ ಮಾಳವಿಕ ಬಳಿ ಅನೇಕ ಬಾರಿ ಮನವಿ ಮಾಡಿದ್ದರು ಎಂದು ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ನೂರಾರು ಬೆಳೆಗಾರರು ಮೂಡಿಗೆರೆ ನ್ಯಾಯಾಲಯದಲ್ಲಿ ವಿವಿಧ ವಕೀಲರ ಮೂಲಕ ದೂರು ದಾಖಲಿಸಿದ್ದರು. ಈ ಪ್ರಕರಣಗಳ ಪೈಕಿ ನಂದೀಶ್ ಅವರ ದೂರನ್ನು ವಿಚಾರಣೆ ಮಾಡಿರುವ ನ್ಯಾಯಾಲಯ ಪ್ರಕರಣ ಸಂಬಂಧ ಮಾಳವಿಕ ಸೇರಿ ಕಂಪೆನಿಯ 6 ಮಂದಿ ವಿರುದ್ಧ ಹಾಗೂ ಎಬಿಸಿ, ಕಾಫಿ ಡೇ ಸಂಸ್ಥೆಗಳ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ. ಈ ಕಂಪೆನಿಗಳು ಕಾಫಿ ಬೆಳೆಗಾರರಿಗೆ ಸುಮಾರು 100 ಕೋ. ರೂ. ಗೂ ಹೆಚ್ಚು ಹಣ ಪಾವತಿ ಮಾಡಬೇಕಿದೆ ಎಂದು ತಿಳಿದು ಬಂದಿದೆ.
ಕಾಫಿ ಡೇ ಹಾಗೂ ಎಬಿಸಿ ಕಂಪೆನಿಗಳನ್ನು ಸ್ಥಾಪಿಸಿ ದೇಶದಲ್ಲಿ ಕಾಫಿಗೆ ಅಂತರಾಷ್ಟ್ರೀಯ ಮಾರುಕಟ್ಟೆ ಒದಗಿಸುವ ಮೂಲಕ ಮನೆ ಮಾತಾಗಿದ್ದ ಸಿದ್ದಾರ್ಥ ಹೆಗಡೆ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಮನನೊಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ನಿಧನದ ಬಳಿಕ ಅವರ ಕುಟುಂಬಸ್ಥರ ಮಾಲಕತ್ವದಲ್ಲಿದ್ದ ಕಾಫಿ ಡೇ, ಎಬಿಸಿ ಸೇರಿದಂತೆ ಕೋಟ್ಯಂತರ ರೂ. ಮೌಲ್ಯದ ವಿವಿಧ ಕಂಪೆನಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದವು. ಪತಿಯನ್ನು ಕಳೆದುಕೊಂಡ ಪತ್ನಿ ಮಾಳವಿಕ ಹೆಗಡೆ ಸೇರಿದಂತೆ ಸಿದ್ದಾರ್ಥ ಹೆಗಡೆ ಕುಟುಂಬಸ್ಥರು ತೀವ್ರ ಕಂಗಾಲಾಗಿರುವ ಸಂದರ್ಭದಲ್ಲಿ ಮಾಳವಿಕ ವಿರುದ್ಧ ನ್ಯಾಯಾಲಯ ಹೊರಡಿಸಿರುವ ಜಾಮೀನು ರಹಿತ ಬಂಧನ ವಾರೆಂಟ್ ಸಿದ್ದಾರ್ಥ ಹೆಗಡೆ ಕುಟುಂಬವನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ.







