'ಉಪಚುನಾವಣೆ ಬಳಿಕ ಸಿಎಂ ಬದಲಾವಣೆ' ಬಗ್ಗೆ ದಿಲ್ಲಿಯಿಂದ ಮಾಹಿತಿ ದೊರೆತಿದೆ ಎಂದ ಸಿದ್ದರಾಮಯ್ಯ
ಯಡಿಯೂರಪ್ಪರ ಪ್ರತಿಕ್ರಿಯೆ ಏನು ಗೊತ್ತಾ ?

ಬೆಂಗಳೂರು, ನ.4: ದಿಲ್ಲಿಯಿಂದ ನನಗೆ ದೊರೆತಿರುವ ಮಾಹಿತಿ ಪ್ರಕಾರ ಉಪಚುನಾವಣೆ ನಂತರ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಾರೆ. ನನಗೆ ವಿಶ್ವಾಸವಿದೆ ಯಡಿಯೂರಪ್ಪ ಬದಲಾಗ್ತಾರೆ. ನಾನು ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದು ಒಂದು ಕಾರಣ, ಇದರ ಜೊತೆಗೆ ಬೇರೆ ಹಲವು ಕಾರಣಗಳೂ ಇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ರಾಜ್ಯ ಸಂಪೂರ್ಣ ಕೊರೋನ ಮುಕ್ತವಾಗುವವರೆಗೆ ಶಾಲೆ ಆರಂಭಿಸುವುದು ಬೇಡ. ಈ ವರ್ಷ ಎಲ್ಲಾ ತರಗತಿಗಳಿಗೆ ಆನ್‍ಲೈನ್ ಮೂಲಕ ಪಾಠ ಮಾಡಿ, ಎಲ್ಲರನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸಲಿ. ಸರಕಾರ ಶಾಲೆ ತೆರೆಯುವ ದುಸ್ಸಾಹಸ ಮಾಡುವುದು ಬೇಡ ಎಂದು ಅವರು ಹೇಳಿದ್ದಾರೆ.
ಶಿರಾ ಹಾಗೂ ಆರ್.ಆರ್.ನಗರ ಎರಡೂ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. ರಾಜ್ಯಾದ್ಯಂತ ಆಡಳಿತ ವಿರೋಧಿ ಅಲೆಯಿದೆ. ಬಿಜೆಪಿ ಸರಕಾರದ ಭ್ರಷ್ಟಾಚಾರ ಹಾಗೂ ಜನವಿರೋಧಿ ಕಾನೂನುಗಳಿಂದ ಜನ ಬೇಸತ್ತಿದ್ದಾರೆ. ಅವೆಲ್ಲಾ ಕಾಂಗ್ರೆಸ್ ಮತಗಳಾಗಿ ಪರಿವರ್ತನೆಯಾಗಿವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ತಿರುಗೇಟು
ಬೆಂಗಳೂರು: ಶಿರಾ ಮತ್ತು ಆರ್.ಆರ್.ನಗರ ಉಪ ಚುನಾವಣೆ ಫಲಿತಾಂಶದ ಬಳಿಕ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಬದಲಾವಣೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.
ಬುಧವಾರ ಸಂಜೆ ನಗರದಲ್ಲಿ `ದಿಲ್ಲಿಯಿಂದ ನನಗೆ ಖಚಿತ ಮಾಹಿತಿ ದೊರೆತಿದ್ದು ಉಪಚುನಾವಣೆ ಬಳಿಕ ಬಿಜೆಪಿಯಲ್ಲಿ ಸಿಎಂ ಬದಲಾವಣೆ ಮಾಡಲಿದ್ದಾರೆ' ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿದ್ದರಾಮಯ್ಯ ಪದೇ ಪದೆ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಲಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ವಿಪಕ್ಷ ನಾಯಕನನ್ನೆ ಬದಲಾವಣೆ ಮಾಡಲಿದ್ದಾರೆ ಎಂದು ಟೀಕಿಸಿದರು.
ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ಗೆಲ್ಲಲಿದ್ದು, ರಾಜ್ಯದಲ್ಲಿ ಬಿಜೆಪಿ ಶಕ್ತಿ ವೃದ್ಧಿಯಾಗುತ್ತದೆ. ಆಗ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದ ಯಡಿಯೂರಪ್ಪ, ನಾನು ಸಿದ್ದರಾಮಯ್ಯರ ಹೇಳಿಕೆಗೆ ಪ್ರತಿಕ್ರಿಯೆ ನೀಡಬಾರದು ಎಂದು ಕೊಂಡಿದ್ದೆ. ಆದರೆ, ಅವರು ಪದೇ ಪದೇ ಆರೋಪ ಮಾಡುತ್ತಿರುವುದರಿಂದ ಸ್ಪಷ್ಟನೆ ನೀಡುತ್ತಿದ್ದೇನೆ. ನ.10ರ ಫಲಿತಾಂಶ ಹೊರ ಬೀಳುವವರೆಗೆ ಅವರು ಕಾಯಲಿ ಎಂದು ಸಲಹೆ ಮಾಡಿದರು.
ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ ತೀರ್ಮಾನ: ಸಚಿವ ಸಂಪುಟ ವಿಸ್ತರಣೆ ಸಂಬಂಧ ಅಗತ್ಯವಾದರೆ ಉಪಚುನಾವಣೆ ಫಲಿತಾಂಶದ ಬಳಿಕ ಹೊಸದಿಲ್ಲಿಗೆ ತೆರಳಲಿದ್ದೇನೆ. ನಿನ್ನೆಯಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ನ.12ರ ನಂತರ ಅವರೊಂದಿಗೆ ಚರ್ಚಿಸಿ, ದಿಲ್ಲಿಗೆ ತೆರಳುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇನೆ ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಮಂಗಳೂರಿನಲ್ಲಿ ನಾಳೆ(ನ.5) ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆಯಲಿದ್ದು, ನಾನು ರಾತ್ರಿ ಮಂಗಳೂರಿಗೆ ತೆರಳುತ್ತಿದ್ದೇನೆ. ನ.5ರ ಗುರುವಾರ ಸಂಜೆ ಮಂಗಳೂರಿನಿಂದ ಬೆಂಗಳೂರಿಗೆ ಹಿಂದಿರುಗಲಿದ್ದೇನೆ ಎಂದು ತಿಳಿಸಿದರು.







