ಪ್ರಶಿಕ್ಷಣ ವರ್ಗದಿಂದ ಮೌಲ್ಯಾದಾರಿತ ವಿಚಾರಗಳ ಅನಾವರಣ

ಉಡುಪಿ, ನ.4: ರಾಜ್ಯ ಬಿಜೆಪಿಯ ಸೂಚನೆಯಂತೆ ನ.15ರೊಳಗೆ ಜಿಲ್ಲೆಯ ಎಲ್ಲಾ ಮಂಡಲಗಳ ವ್ಯಾಪ್ತಿಯಲ್ಲಿ ಪಕ್ಷದ ಪದಾಧಿಕಾರಿಗಳಿಗೆ ನಡೆಯ ಲಿರುವ ಪ್ರಶಿಕ್ಷಣ ವರ್ಗದ ಮೂಲಕ ಹಿರಿಯರ ಮಾರ್ಗದರ್ಶನ, ಪಕ್ಷದ ಇತಿಹಾಸ, ಸಂಘಟನೆ ಮುಂತಾದ ಮೌಲ್ಯಾದಾರಿತ ವಿಚಾರಗಳು ಅನಾವರಣಗೊಳ್ಳಲಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೂರು ವರ್ಷಗಳ ಅವಧಿಗೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳಿಗೆ ಪಕ್ಷದ ತತ್ವ ಸಿದ್ದಾಂತ, ಸಂಘಟನೆ, ವ್ಯಕ್ತಿತ್ವ ವಿಕಸನ, ಕಾರ್ಯಪದ್ಧತಿ, ಸರಕಾರದ ಸಾಧನೆಗಳು ಇವೇ ಮುಂತಾದ ಹತ್ತು ಹಲವು ವಿಚಾರಗೋಷ್ಠಿಗಳ ಮೂಲಕ ಎರಡು ದಿನಗಳ ಪ್ರಶಿಕ್ಷಣ ವರ್ಗ ಹೊಸ ಚೈತನ್ಯ ತುಂಬಲಿದೆ ಎಂದರು.
ಪಕ್ಷ ಸಂಘಟನೆಯ ಜೊತೆಗೆ ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪ್ರಚಂಡ ಗೆಲುಗೆ ಶ್ರಮಿಸಿ ಎಲ್ಲಾ ಗ್ರಾಪಂಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವಂತೆ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಂಘಟಿತರಾಗಿ ತೊಡಗಿಸಿಕೊಳ್ಳಬೇಕು ಎಂದು ಕುಯಿಲಾಡಿ ಹೇಳಿದರು.
ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕ ರಘುವೀರ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಮಾಹಿತಿ ನೀಡಿದರು. ಬಿಜೆಪಿ ಜಿಲ್ಲಾ ಪದಾಧಿಕಾರಿಗಳು ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠದ ಸಹ ಸಂಚಾಲಕ ಸುಬ್ರಹ್ಮಣ್ಯ ಪೈ ಸ್ವಾಗತಿಸಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







