ಮದುವೆಗಾಗಿ ಮತಾಂತರ ತಡೆ ಕಾನೂನು ಜಾರಿಗೆ ರಾಜ್ಯಗಳು ಉತ್ಸುಕ : ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ

ಮಂಗಳೂರು, ನ.4: ‘ಮದುವೆಗಾಗಿ ಮತಾಂತರ ಒಪ್ಪದು’ ಎಂದು ಹೈಕೋರ್ಟ್‌ವೊಂದು ಅಭಿಪ್ರಾಯಪಟ್ಟಿರುವುದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಹಲವು ರಾಜ್ಯಗಳು ಈ ಕಾನೂನು ಜಾರಿಗೆ ತರಲು ಉತ್ಸುಕವಾಗಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆಯ ಸಚಿವ ಪ್ರಲ್ಹಾದ್ ಜೋಷಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಮಧ್ಯಪ್ರದೇಶ, ಉತ್ತರಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು ‘ಮದುವೆಗಾಗಿ ಮತಾಂತರ’ ತಡೆಯುವ ಕಾನೂನು ತರುವುದಾಗಿ ಈಗಾಗಲೇ ಪ್ರಕಟಿಸಿರುವುದು ಕಂಡುಬಂದಿದೆ. ಇಂತಹ ಕಾನೂನು ರಾಜ್ಯದಲ್ಲೂ ಜಾರಿಯಾಗಬೇಕು. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಜತೆ ಚರ್ಚೆ ನಡೆಸಿ ಕಾನೂನು ಜಾರಿಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ನ. 5ರಂದು ಮಂಗಳೂರಿನಲ್ಲಿ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಸೀಮಿತ ಸದಸ್ಯರೊಂದಿಗೆ ಸಭೆಗಳು ನಡೆಯಲಿವೆ. ಸಭೆಯಲ್ಲಿ ಮುಂದಿನ ಉಪಚುನಾವಣೆಗಳು, ಗ್ರಾಪಂ ಚುನಾವಣೆಗಳ ಬಗ್ಗೆ ಚರ್ಚೆ ನಡೆಸಿ, ಕಾರ್ಯಸೂಚಿಗಳ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.





