ಶಿವಮೊಗ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನ.5 ರಂದು ಹೆದ್ದಾರಿ ಬಂದ್

ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರ ಸುಗ್ರಿವಾಜ್ಞೆಗಳ ಮೂಲಕ ಜಾರಿಗೆ ತಂದಿರುವ ಕೃಷಿ ಮಸೂದೆಗಳನ್ನು ವಿರೋಧಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳು, ಕರ್ನಾಟಕ ಜನಶಕ್ತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಗಳು(ಅಂಬೇಡ್ಕರ್‌ವಾದ) ನವೆಂಬರ್ 5 ರಂದು ಹೆದ್ದಾರಿ ಬಂದ್ ಮಾಡಲು ಕರೆ ನೀಡಿವೆ.
ಸರ್ಕಾರ ತಕ್ಷಣವೇ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಆರಂಭಿಸಬೇಕು ಹಾಗೂ ಪಂಜಾಬ್ ಸರ್ಕಾರದಂತೆ ರಾಜ್ಯ ಸರ್ಕಾರವು ಕೃಷಿ ಉತ್ಪನ್ನಗಳನ್ನು ಎಂಎಸ್‌ಪಿ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದು ಅಪರಾಧವೆಂದು ಘೋಷಿಸುವಂತೆ ಒತ್ತಾಯಿಸಿ ಹೆದ್ದಾರಿ ಬಂದ್‌ಗೆ ಕರೆ ನೀಡಿದೆ. ಅದರಂತೆ ನವೆಂಬರ್ 5 ರಂದು ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜು ಹತ್ತಿರ ಇರುವ ಎಂ.ಆರ್.ಎಸ್ ವೃತ್ತದಲ್ಲಿ ರಾಜ್ಯ ರೈತ ಸಂಘ, ಕರ್ನಾಟಕ ಜನ ಶಕ್ತಿ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ವಾದ) ಕಾರ್ಯಕರ್ತರು ಹೆದ್ದಾರಿ ಬಂದ್ ಮಾಡಲಿದ್ದಾರೆ.
ನೂರಾರು ಸಂಖ್ಯೆಯಲ್ಲಿ ರೈತರು ಆಗಮಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲಿದ್ದಾರೆ. ಜೊತೆಗೆ ಕೇರಳ ಸರ್ಕಾರದಂತೆ ತರಕಾರಿ ಬೆಳೆಗಳಿಗೆ ಬೆಲೆ ನಿಗಧಿ ಮಾಡಬೇಕು ಎಂಬ ಕೂಗಿನ ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಂದಿರುವ ಸುಗ್ರಿವಾಜ್ಞೆಗಳನ್ನು ಹಿಂಪಡೆಯಬೇಕು ಎಂಬ ಒತ್ತಾಯಿಸಲಾಗಿದೆ.
ರೈತರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಜಮಾವಣೆ ಸೇರುವ ಸಾಧ್ಯತೆ ಇದೆ. ಹೆದ್ದಾರಿ ಬಂದ್ ಮಾಡುವುದರಿಂದ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದ್ದು, ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.







