ಉಡುಪಿ : ನಕಲಿ ದಂತ ವೈದ್ಯನ ಡೆಂಟಲ್ ಕ್ಲಿನಿಕ್‌ಗೆ ಸೀಲ್

ಉಡುಪಿ, ನ.4: ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಸದಾನಂದ ಟವರ್‌ನಲ್ಲಿ ನಕಲಿ ದಂತ ವೈದ್ಯ ನಡೆಸುತ್ತಿದ್ದ ಡೆಂಟಲ್ ಕ್ಲಿನಿಕ್‌ನ್ನು ಉಡುಪಿ ತಾಲೂಕು ಆರೋಗ್ಯ ಇಲಾಖೆ ಸೀಲ್ ಮಾಡಿದೆ.
ಉಡುಪಿಯ ಶ್ವೇತಾ ಎಂಬವರು ಶಾಶ್ವತ್ ಡೆಂಟಲ್ ಕ್ಲಿನಿಕ್ ಮತ್ತು ಲ್ಯಾಬ್ ಹೆಸರಿನ ವೈದ್ಯಕೀಯ ಸಂಸ್ಥೆಯನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007ರ ಅಡಿಯಲ್ಲಿ ನೊಂದಾವಣಿ ಮಾಡಿದ್ದರು. ಆದರೆ ಶ್ವೇತಾ ಕ್ಲಿನಿಕ್ ನಡೆಸದೆ ಯಾವುದೇ ವೈದ್ಯಕೀಯ ಪದವಿ ಹೊಂದಿರದ ಗೋವಿಂದ ಭಂಡಾರಿ ಎಂಬವರಿಗೆ ಅದನ್ನು ನಡೆಸಲು ನೀಡಿದ್ದರು. ಭಂಡಾರಿ ನಕಲಿ ದಂತ ವೈದ್ಯನಾಗಿ ಕ್ಲಿನಿಕ್ ನಡೆಸುತ್ತಿದ್ದನು ಎಂದು ತಿಳಿದುಬಂದಿದೆ.
ಈ ಬಗ್ಗೆ ಆರೋಗ್ಯ ಇಲಾಖೆಯು ಅ.21ರಂದು ಈ ಕ್ಲಿನಿಕ್‌ನ್ನು ಸೀಲ್ ಮಾಡಿದೆ. ಆರೋಪಿಗಳು ಸಮಾನ ಉದ್ದೇಶದಿಂದ ಸಾರ್ವಜನಿಕರನ್ನು ವಂಚಿಸಿ ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕರಿಗೆ ಅಪರಾಧಿಕ ನಂಬಿಕೆ ದ್ರೋಹ ಎಸಗಿ ವಂಚನೆ ಮಾಡಿರುವುದಾಗಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





