ಮಂಗಳೂರ ವಿ.ವಿ : ವೃತ್ತಿಪರ ಕೋರ್ಸ್ ಆರಂಭ; ಅರ್ಜಿ ಸಲ್ಲಿಕೆಗೆ ನ.16 ಕೊನೆಯ ದಿನ
ಮಂಗಳೂರು, ನ.4: ಮಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದಲ್ಲಿ ಎಂಎಲ್‌ಐಎಸ್‌ಸಿ ಸ್ನಾತ ಕೋತ್ತರ ಪದವಿ ಪಡೆಯಬಯಸುವ ವಿದ್ಯಾರ್ಥಿಗಳು ನ.16ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ವಿಭಾಗದ ಅಧ್ಯಕ್ಷ ಡಾ.ಡಿ.ಶಿವಲಿಂಗಯ್ಯ ಹೇಳಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷದ ಈ ಕೋರ್ಸ್‌ಗೆ ಸೇರ್ಪಡೆಗೊಳ್ಳಲು ಕೇವಲ 38 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಪದವಿ ಪಡೆದವರಿಗೆ ಸಾಕಷ್ಟು ಉದ್ಯೋಗವಕಾಶಗಳೂ ಇವೆ. ಆದರೆ ಈ ಕೋರ್ಸ್‌ನ ಬಗ್ಗೆ ಹೆಚ್ಚಿನ ಮಂದಿಗೆ ಮಾಹಿತಿಯ ಕೊರತೆಯಿದೆ. ಮಹತ್ವಪೂರ್ಣ ವಿಷಯದ ಈ ಕೋರ್ಸ್‌ಗೆ ಯಾವುದೇ ಪದವಿ ವಿದ್ಯಾರ್ಥಿಗಳು ಸೇರಿಕೊಳ್ಳಬಹುದು ಎಂದರು.
ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗವು 1982ರಿಂದ 1996ರವರೆಗೆ 1 ವರ್ಷದ ಬಿಎಲ್‌ಐಎಸ್‌ಸಿ ಕೋರ್ಸ್, 1990ರಿಂದ 1997ರವರೆಗೆ 1 ವರ್ಷದ ಸ್ನಾತಕೋತ್ತರ ಎಂಎಲ್‌ಐಎಸ್‌ಸಿ ಕೋರ್ಸ್, 1996ರಿಂದ 2 ವರ್ಷದ ಸ್ನಾತಕೋತ್ತರ ಎಂಎಲ್‌ಐಸ್‌ಸಿ ಕೋರ್ಸ್ ಮತ್ತು ಪಿಎಚ್‌ಡಿ ಕೋರ್ಸನ್ನು ಪ್ರಾರಂಭಿಸಿತ್ತು. ಸಾವಿರಾರು ವಿದ್ಯಾರ್ಥಿಗಳು ಈ ಕೋರ್ಸ್ ಪಡೆದು ಉನ್ನತ ಮಟ್ಟಕ್ಕೆ ಏರಿದ್ದಾರೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು ಸುಸಜ್ಜಿತವಾದ ಗಣಕಯಂತ್ರ ಪ್ರಯೋಗಾಲಯವನ್ನು ಹೊಂದಿದ್ದು, ವಿದ್ಯಾರ್ಥಿಗಳಿಗೆ ಅಂತರ್ಜಾಲದ ಸೌಲಭ್ಯ ಇದೆ. ಇದೊಂದು ವೃತ್ತಿಪರ ಕೋರ್ಸ್ ಆಗಿದ್ದು, ಗರಿಷ್ಠ ಪ್ರಮಾಣದ ಉದ್ಯೋಗವಕಾಶಗಳು ಇವೆ. ಪರಿಷ್ಕೃತ ಮತ್ತು ನವೀಕರಿಸಿದ ಪಠ್ಯಕ್ರಮವನ್ನು ಒಳಗೊಂಡಿದೆ. ಹೆಚ್ಚಿನ ವಿಷಯಗಳು ಕಂಪ್ಯೂಟರ್ ಮತ್ತು ಮಾಹಿತಿ ಸಂವಹನ ತಂತ್ರಜ್ಞಾನ(ಐಸಿಟಿ) ಸಂಬಂಧಿಸಿದ್ದಾಗಿದೆ ಎಂದು ಅವರು ವಿವರಿಸಿದರು.
ಈ ವಿಭಾಗದಿಂದ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಾದ ಬ್ರಿಟೀಷ್ ಲೈಬ್ರೆರಿ, ಬೆಂಗಳೂರು, ಮುಂಬೈ, ಇನ್ಫೋಸಿಸ್, ಅಹ್ಮದಾಬಾದ್, ಆಸ್ಟ್ರೇಲಿಯಾ, ಸಿಂಗಾಪುರ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಡಾಕ್ಯುಮೆಂಟೇಷನ್ ಮತ್ತು ವೈಜ್ಯಾನಿಕ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಬಹುತೇಕ ಮಂದಿ ಗ್ರಂಥಪಾಲಕರು, ಪ್ರಾಧ್ಯಾಪಕರು ಮತ್ತು ಸಹ ಪ್ರಾಧ್ಯಾಪಕರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ ಈ ಕೋರ್ಸ್‌ನ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು (ಕೋರ್ಸ್ ಕುರಿತ ವಿವರಗಳಿಗೆ ವಿಭಾಗದ ದೂ.ಸಂ.0824-2287316, 9448358314ನ್ನು ಸಂಪರ್ಕಿಸಬಹುದು) ಎಂದು ಡಾ.ಶಿವಲಿಂಗಯ್ಯ ಮನವಿ ಮಾಡಿದರು.







