ರಾಜಕೀಯ ಬೆಳವಣಿಗೆಗಳಿಂದ ಸಂವಿಧಾನ ಕಳೆದುಕೊಳ್ಳುವ ಭೀತಿಯಿದೆ: ನಿವೃತ್ತ ನ್ಯಾ.ನಾಗಮೋಹನ್ ದಾಸ್

ಬೆಂಗಳೂರು, ನ.4: ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ದೇಶ ಸಂಕಷ್ಟದಲ್ಲಿದ್ದು, ಸಂವಿಧಾನವನ್ನೇ ಕಳೆದುಕೊಳ್ಳುವಂತಹ ಭಯ ಭೀತಿಯಲ್ಲಿ ಬದುಕುವಂತಾಗಿದೆ ಎಂದು ನಿವೃತ್ತ ನ್ಯಾ. ನಾಗಮೋಹನ್‍ದಾಸ್ ಆತಂಕ ವ್ಯಕ್ತಪಡಿಸಿದ್ದಾರೆ.
ಬುಧವಾರ ಸಿಐಟಿಯು ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಮಾರುತಿ ಮಾನ್ಪಡೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯ ಸ್ವಾರ್ಥಕ್ಕಾಗಿ ದೇಶದಲ್ಲಿ ಪ್ರತಿದಿನ ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಳೆದ 70 ವರ್ಷಗಳಿಂದ ಕಷ್ಟಪಟ್ಟು ಕಟ್ಟಿದಂತಹ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಧ್ವಂಸ ಮಾಡಲಾಗುತ್ತಿದೆ. ನಿರಂತರವಾದ ಹೋರಾಟದ ಫಲವಾಗಿ ಪಡೆದುಕೊಂಡಿದ್ದ ಶ್ರಮಿಕ ವರ್ಗಗಳ ಹಕ್ಕುಗಳನ್ನು ಕಸಿಯಲಾಗುತ್ತಿದೆ. ನಮ್ಮನ್ನಾಳುವ ಸರಕಾರಗಳು ಪ್ರಜಾಪ್ರಭುತ್ವದ ವಿರುದ್ಧವಾಗಿ ಅಪ್ರಜಾಪ್ರಭುತ್ವ ಸುಧಾರಣೆಗಳನ್ನು ಜಾರಿಗೊಳಿಸುತ್ತಿದ್ದು, ಕಾರ್ಮಿಕ, ರೈತರು ಹಾಗೂ ಸರಕಾರಿ ನೌಕರರ ಹಕ್ಕು, ಮೌಲ್ಯಗಳ ವಿರುದ್ಧವಾಗಿ ಕಾನೂನು ಜಾರಿ ಮಾಡುತ್ತಿವೆ ಎಂದು ಅವರು ಅರೋಪಿಸಿದ್ದಾರೆ.
ಪ್ರಾಂತರೈತ ಸಂಘದ ಪ್ರಧಾನ ಕಾರ್ಯದರ್ಶಿ ವರಲಕ್ಷ್ಮಿ ಮಾತನಾಡಿ, ಸರಕಾರ ನೀತಿಗಳು ಕೇವಲ ಶ್ರೀಮಂತರ ಪರವಾಗಿದ್ದು, ಇದನ್ನು ಬದಲಾಯಿಸುವುದಕ್ಕಾಗಿಯೇ ಮಾರುತಿ ಮಾನ್ಪಡೆ ನಿರಂತರವಾಗಿ ಹೋರಾಟ ಮಾಡಿ ಕೋವಿಡ್‍ಗೆ ತುತ್ತಾಗಿದ್ದಾರೆ. ಇವರ ಹೋರಾಟದ ಆಶಯಗಳ ಈಡೇರಿಕೆಗಾಗಿ ನಾವು ಪಣ ತೊಡೋಣವೆಂದು ತಿಳಿಸಿದ್ದಾರೆ.
ಕೋವಿಡ್ ಹಾಗೂ ಲಾಕ್‍ಡೌನ್‍ನಿಂದಾಗಿ ಸಣ್ಣ ವ್ಯಾಪಾರಸ್ಥರು, ರೈತರು, ಕಾರ್ಮಿಕರು, ಕೂಲಿಕಾರರು ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಆದರೆ, ಅದೇ ಸಮಯದಲ್ಲಿ ರಿಲಾಯನ್ಸ್ ಸೇರಿದಂತೆ ಬಂಡವಾಳಶಾಹಿಗಳ ಆದಾಯ ಹೆಚ್ಚಾಗುತ್ತಿದೆ. ಸರಕಾರದ ನೀತಿಗಳಿಂದಾಗಿ ಇಡೀ ದೇಶದ ಸಂಪತ್ತು ಬಂಡವಾಳಶಾಹಿಗಳ ಹಿಡಿತಕ್ಕೆ ಸಿಲುಕಿದೆ. ಇದನ್ನು ವಿರೋಧಿಸಿ ನ.26ರಂದು ದೇಶಾದ್ಯಂತ ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಭೆಯಲ್ಲಿ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಆರ್‍ಡಿಪಿಆರ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸರಕಾರಗಳು ಜನವಿರೋಧಿ ನೀತಿಗಳ ವಿರುದ್ದ ಮಾತನಾಡಿದರೆ ಬಂಧಿಸುವ ಪ್ರಕ್ರಿಯೆ ಮುಂದುವರಿಸಿದೆ. ಇದೆಲ್ಲವುಗಳನ್ನು ನೋಡಿಕೊಂಡು ಮಾರುತಿ ಮಾನ್ಪಡೆ ಸುಮ್ಮನಿರುತ್ತಿರಲಿಲ್ಲ. ಹೀಗಾಗಿ ನಾವೆಲ್ಲರೂ ಮಾರುತಿ ಮಾನ್ಪಡೆ ಹಾಕಿಕೊಟ್ಟ ಹೋರಾಟದ ದಾರಿಯಲ್ಲಿ ಮುನ್ನಡೆಯಬೇಕು.
-ನ್ಯಾ.ನಾಗಮೋಹನ್‍ದಾಸ್, ನಿವೃತ್ತ ನ್ಯಾಯಾಧೀಶರು
.jpg)







