ಕೊರೋನ ವೈರಸ್:ಸತತ ಆರನೇ ದಿನವೂ 6 ಲಕ್ಷ ಮೀರದ ಸಕ್ರಿಯ ಪ್ರಕರಣಗಳ ಸಂಖ್ಯೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ನ.4: ಭಾರತದಲ್ಲಿ ಸಕ್ರಿಯ ಕೋವಿಡ್ -19 ಪ್ರಕರಣಗಳ ಸಂಖ್ಯೆ ಕ್ರಮೇಣ ಇಳಿಕೆಯಾಗುತ್ತಿದೆ. ಮರಣ ದರದಲ್ಲಿ ನಿರಂತರ ಇಳಿಕೆ ಮತ್ತು ಪ್ರತಿದಿನ ಹೆಚ್ಚೆಚ್ಚು ರೋಗಿಗಳು ಗುಣಮುಖಗೊಳ್ಳುತ್ತಿದ್ದು,ಸತತ ಆರನೇ ದಿನವಾದ ಬುಧವಾರವೂ ಸಕ್ರಿಯ ಪ್ರಕರಣಗಳ ಸಂಖ್ಯೆ ಆರು ಲಕ್ಷಕ್ಕಿಂತ ಕಡಿಮೆಯೇ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.
ಬುಧವಾರ ಬೆಳಿಗ್ಗೆ ಇದ್ದಂತೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,33,787 ಆಗಿದ್ದು,ಇದು ಒಟ್ಟು ಪ್ರಕರಣಗಳ ಕೇವಲ ಶೇ.6.42ರಷ್ಟಿದೆ. ಗುಣಮುಖರಾದವರ ಸಂಖ್ಯೆ 76,56,478ಕ್ಕೇರಿದ್ದು,ರಾಷ್ಟ್ರೀಯ ಚೇತರಿಕೆ ದರವು ಶೇ.92ನ್ನು ದಾಟಿದೆ.
ಅಸ್ಸಾಂ,ಪಂಜಾಬ್ , ಪ.ಬಂಗಾಳ, ಗುಜರಾತ್, ಜಾರ್ಖಂಡ್, ರಾಜಸ್ಥಾನ್, ಉತ್ತರ ಪ್ರದೇಶ,ಮಧ್ಯಪ್ರದೇಶ ಮತ್ತು ಬಿಹಾರ ಸೇರಿದಂತೆ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಪ್ರಕರಣಗಳ ಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿದೆ. 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಚೇತರಿಕೆ ದರವನ್ನು ಹೊಂದಿವೆ ಎಂದು ಸಚಿವಾಲಯವು ತಿಳಿಸಿದೆ.
ಬುಧವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 46,253 ಹೊಸ ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು,53,357 ರೋಗಿಗಳು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಶೇ.76ರಷ್ಟು ಹೊಸ ಸೋಂಕು ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗಿದ್ದು,ಗರಿಷ್ಠ ಅಂದರೆ ತಲಾ 6,000ಕ್ಕೂ ಅಧಿಕ ಪ್ರಕರಣಗಳು ಕೇರಳ ಮತ್ತು ದಿಲ್ಲಿಗಳಲ್ಲಿ ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 4,000ಕ್ಕೂ ಅಧಿಕ ಹೊಸ ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ ಒಟ್ಟು 514 ಸಾವುಗಳು ವರದಿಯಾಗಿದ್ದು,ಸುಮಾರು ಶೇ.80ರಷ್ಟು ಸಾವುಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಭವಿಸಿವೆ. 120 ಸಾವುಗಳೊಂದಿಗೆ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ.
ಕಳೆದ 24 ಗಂಟೆಗಳಲ್ಲಿ ವರದಿಯಾಗಿರುವ ಹೊಸ ಚೇತರಿಕೆ ಪ್ರಕರಣಗಳಲ್ಲಿ ಶೇ.80ರಷ್ಟು ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿವೆ. ಈ ಪೈಕಿ ಕೇರಳ (8,000ಕ್ಕೂ ಅಧಿಕ) ಮೊದಲ ಸ್ಥಾನದಲ್ಲಿದ್ದರೆ,ಕರ್ನಾಟಕ (7,000ಕ್ಕೂ ಅಧಿಕ) ನಂತರದ ಸ್ಥಾನದಲ್ಲಿದೆ.
ಮಂಗಳವಾರ ಒಂದೇ ದಿನ 12,09,609 ಕೋವಿಡ್ -19 ಪರೀಕ್ಷೆಗಳನ್ನು ನಡೆಸಲಾಗಿದ್ದು,ಇದರೊಂದಿಗೆ ಈವರೆಗಿನ ಪರೀಕ್ಷೆಗಳ ಸಂಖ್ಯೆ 11,29,98,959ಕ್ಕೇರಿದೆ.
ದೇಶದಲ್ಲಿ ಕೋವಿಡ್-19 ಮರಣ ದರ ಶೇ.1.49ರಷ್ಟಿದ್ದು, 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಸಾವುಗಳ ಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿದೆ ಎಂದು ಸಚಿವಾಲಯವು ತಿಳಿಸಿದೆ.