ಮಹಾರಾಷ್ಟ್ರ ಸರಕಾರದ ಗೌರವಕ್ಕೆ ಧಕ್ಕೆ ತರಲು ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ 50 ಸಾವಿರ ನಕಲಿ ಖಾತೆ ಸೃಷ್ಟಿ
ಮುಂಬೈ ಪೊಲೀಸರ ತನಿಖೆಯಲ್ಲಿ ಬಹಿರಂಗ

ಮುಂಬೈ, ನ. 4: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಹಲವು ನಕಲಿ ಖಾತೆಗಳು ಸೃಷ್ಟಿಯಾಗಿವೆ ಹಾಗೂ ಮಹಾರಾಷ್ಟ್ರ ಸರಕಾರ, ಮುಂಬೈ ಪೊಲೀಸರ ವಿರುದ್ಧ ನಕಾರಾತ್ಮಕ ಅಭಿಪ್ರಾಯಗಳನ್ನು ಹುಟ್ಟು ಹಾಕಿವೆ. ಪೊಲೀಸ್ ಆಯುಕ್ತ ಪರಮ್ ವೀರ್ ಸಿಂಗ್ ಅವರ ವರ್ಚಸ್ಸಿಗೆ ಕೂಡ ಧಕ್ಕೆ ಉಂಟು ಮಾಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಹಾಗೂ ಸರಕಾರದ ಗೌರವಕ್ಕೆ ಹಾನಿ ಉಂಟು ಮಾಡುವ ಸಾಮಾಜಿಕ ಜಾಲ ತಾಣದಲ್ಲಿ ಮತ್ತೆ 50 ಸಾವಿರಕ್ಕೂ ಅಧಿಕ ನಕಲಿ ಖಾತೆಗಳನ್ನು ಮುಂಬೈ ಪೊಲೀಸರು ತಮ್ಮ ತನಿಖೆಯಲ್ಲಿ ಪತ್ತೆ ಹಚ್ಚಿದ್ದಾರೆ.
ಇಂತಹ ನಕಲಿ ಖಾತೆಗಳು ಈಗಾಗಲೇ 1.5 ಲಕ್ಷ ದಾಟಿವೆ. ಆರೋಪಿಗಳು ಅನಾಮಿಕರಾಗಿರಲು ಹಾಗೂ ಜಾರಿ ನಿರ್ದೇಶನಾಲಯದ ಕಣ್ಣು ತಪ್ಪಿಸಲು ಪಾವತಿ ಪ್ರೋಗ್ರಾಂ ಹಾಗೂ ಪ್ರಾಕ್ಸಿ ಸರ್ವರ್‌ಗಳನ್ನು ಬಳಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿವಿಧ ಹ್ಯಾಷ್‌ಟ್ಯಾಗ್‌ಗಳನ್ನು ಬಳಸಿ ರಾಜ್ಯ ಸರಕಾರ, ಮುಂಬೈ ಪೊಲೀಸ್ ಹಾಗೂ ಪೊಲೀಸ್ ಆಯುಕ್ತರ ಕುರಿತು ನಕಾರಾತ್ಮಕ ಅಭಿಪ್ರಾಯವನ್ನು ಈ ಖಾತೆಗಳು ರೂಪಿಸುತ್ತಿವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಪೊಲೀಸರು ತಿಳಿಸಿದ್ದಾರೆ.







