ನ.5ರಂದು ನಡೆಸಲು ಉದ್ದೇಶಿಸಿದ್ದ ಮಂಗಳೂರು - ಕಲ್ಲಡ್ಕ ಹೆದ್ದಾರಿ ತಡೆ ಚಳವಳಿ ಮುಂದೂಡಿಕೆ: ಎಸ್.ಡಿ.ಪಿ.ಐ.
ಬಂಟ್ವಾಳ : ಹದಗೆಟ್ಟಿರುವ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ದುರಸ್ತಿ ಮಾಡದೆ ನಿರ್ಲಕ್ಷ್ಯ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕ್ರಮವನ್ನು ಖಂಡಿಸಿ ಎಸ್.ಡಿ.ಪಿ.ಐ. ನವೆಂಬರ್ 5ರಂದು ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಜಾಥ ಮತ್ತು ರಸ್ತೆ ತಡೆ ಚಳವಳಿಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಪಕ್ಷದ ಪ್ರಕಟನೆ ತಿಳಿಸಿದೆ.
ಹೊಂಡ ಗುಂಡಿಗಳು ಬಿದ್ದು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹದಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ. ಡಾಂಬರೀಕರಣ ಮಾಡುವ ಮೂಲಕ ಹೆದ್ದಾರಿಯನ್ನು ಸುವ್ಯವಸ್ಥೆಗೆ ತರಬೇಕೆಂದು ಹೆದ್ದಾರಿ ಪ್ರಾಧಿಕಾರಕ್ಕೆ ಪಕ್ಷದಿಂದ ಗಡುವು ನೀಡಲಾಗಿತ್ತು. ಗಡುವು ಮುಗಿದ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ನವೆಂಬರ್ 5ರಂದು ಕಲ್ಲಡ್ಕದಿಂದ ಪಾಣೆಮಂಗಳೂರು ವರೆಗೆ ಜಾಥ ನಡೆಸಿ ಪಾಣೆಮಂಗಳೂರಿನಲ್ಲಿ ರಸ್ತೆ ತಡೆ ಚಳವಳಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಚಳವಳಿಯನ್ನು ಮುಂದೂಡಲಾಗಿದೆ.
ನ. 5ರಂದು ಮುಖ್ಯಮಂತ್ರಿ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಪೊಲೀಸರು ಮಾಡಿರುವ ಮನವಿಗೆ ಸ್ಪಂದಿಸಿ ಜಾಥವನ್ನು ಮುಂದೂಡಲಾಗಿದೆ. ಅಲ್ಲದೆ ಹೆದ್ದಾರಿ ದುರಸ್ಥಿ ಬಗ್ಗೆ ಬಂಟ್ವಾಳ ತಹಶೀಲ್ದಾರ್ ನೇತೃತ್ವದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಪಕ್ಷದ ಮುಖಂಡರ ಸಭೆಯನ್ನು ನವೆಂಬರ್ 6ರಂದು ನಡೆಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ. ಈ ಸಭೆಯಲ್ಲಿ ಹೆದ್ದಾರಿ ದುರಸ್ತಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕೆಲವು ದಿನಗಳ ಗಡುವು ನೀಡಲಾಗುವುದು. ಅಧಿಕಾರಿಗಳು ಗಡುವು ತಪ್ಪಿದರೆ ಮುಂದೆ ರಸ್ತೆ ಚಳವಳಿ ನಡೆಸಲಾಗುವುದು ಎಂದು ಪಕ್ಷದ ಪ್ರಕಟನೆ ತಿಳಿಸಿದೆ.
ನವೆಂಬರ್ 6ರಂದು ಬೆಳಗ್ಗೆ ತಹಶಿಲ್ದಾರ್, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಒಂದು ವೇಳೆ ಸಭೆ ನಡೆಸುವಲ್ಲಿ ವಿಫಲರಾದರೆ ಅದೇ ದಿನ ಅಪರಾಹ್ನ 3 ಗಂಟೆಗೆ ಕಲ್ಲಡ್ಕದಿಂದ ಪಾಣೆಮಂಗಳೂರು ವರೆಗೆ ಜಾಥ ನಡೆಸಿ ಪಾಣೆಮಂಗಳೂರು ಮಾಂಡೊವಿ ಕಾರು ಶೋ ರೂಂ ಬಳಿ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಸ್.ಡಿ.ಪಿ.ಐ. ಪ್ರಕಟನೆ ತಿಳಿಸಿದೆ.







