ಮೈಸೂರು: ಹೆದ್ದಾರಿ ಬಂದ್ ಮಾಡಿ ರೈತರಿಂದ ಪ್ರತಿಭಟನೆ

ಮೈಸೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ,ದಲಿತ,ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ರೈತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರಸ್ತೆ ತಡೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ಮೈಸೂರು-ನಂಜನಗೂಡು ರಸ್ತೆಯ ರಾಷ್ಟ್ರೀಯ ಹೆದ್ದಾರಿ 212 ರ ರಿಂಗ್ ರಸ್ತೆ ಜಂಕ್ಷನ್ ನಲ್ಲಿ ಜಮಾಯಿಸಿದ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಪಿಎಂಸಿ ಕಾಯ್ದೆ ತಿದ್ದುಪಡಿ,ವಿದ್ಯತ್ ತಿದ್ದುಪಡಿ,ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಕೈಗಾರಿಕೆ ಮತ್ತು ಅಗತ್ಯ ವಸ್ತುಗಳ ಮೇಲೆ ತಿದ್ದುಪಡಿ ತರುವ ಮೂಲಕ ರೈತರಿಗೆ ಮರಣ ಶಾಸನ ಬರೆದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅದಾನಿ, ಅಂಬಾನಿ ಮತ್ತು ವಿಜಯ ಮಲ್ಯ ಅವರ ಸಾಲವನ್ನು ಪ್ರಧಾನಿ ನರೇಂದ್ರ ಮೋದಿ ಮನ್ನಾ ಮಾಡುತ್ತಾರೆ, ಕಾರು ಸಾಲ ಪಡೆದವರು, ಕೈಗಾರಿಕೆ ಮೇಲೆ 2 ಕೋಟಿ ರೂ ಸಾಲ ಪಡೆದವರ ಚಕ್ರ ಬಡ್ಡಿಯನ್ನು ಮನ್ನಾ ಮಾಡುತ್ತಾರೆ ಆದರೆ ರೈತರು ಪಡೆದ ಸಾಲ ಮನ್ನಾ ಮಾಡುವುದಿರಲಿ ಚಕ್ರ ಬಡ್ಡಿಯನ್ನೂ ಸಹ ಮನ್ನಾ ಮಾಡುವುದಿಲ್ಲ ಎಂದು ಕಿಡಿಕಾರಿದರು.
ಕಪಿಲ್ ಸಿಬಲ್ ಕೇಂದ್ರ ಸಚಿವರಾಗಿದ್ದ ವೇಳೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದಾಗ ಇದೇ ಬಿಜೆಪಿಯ ಅರುಣ್ ಜೇಟ್ಲಿ ವಿರೋಧ ವ್ಯಕ್ತ ಪಡಿಸಿದ್ದರು, ಈ ಕಾಯ್ದೆಯಿಂದ ರೈತರಿಗೆ ತೊಂದರೆಯಾಗಲಿದೆ ಎಂದು ಪಾರ್ಲಿ ಮೆಂಟ್ ನಲ್ಲಿ ಪ್ರತಿಭಟಿಸಿದ್ದರು ಆದರೆ ಕಾರ್ಪೋ ರೇಟ್ ಕಂಪನಿಗಳಿಗೆ ಗುಲಾಮರಾಗಿರು ನರೇಂದ್ರ ಮೋದಿ ಎಪಿಎಂಸಿ ಕಾಯ್ದೆಯಂತಹ ರೈತ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದು ಇಡೀ ದೇಶದ ರೈತರ ಜೀವನದ ಮೇಲೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಸುಘ್ರೀವಾಜ್ಞೆ ಮೂಲಕ ಹಲವು ಮದಮಸೂದೆಗಳನ್ನು ಜಾರಿಗೆ ತಂದಿದೆ. ಪ್ರತಿಪಕ್ಣಗಳ ವಿರೋಧದ ನಡುವೆಯೂ ಸದನದಲ್ಲಿ ಅಂಗೀಕರಿಸಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ನಡೆ ವಿರೋಧಿಸಿ 13 ರಾಜ್ಯಗಳ ರೈತರು ನಿರಂತರ ಹೋರಾಟ ಮಾಡುತ್ತಿದ್ದಾರೆ. ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯುವ ವರೆಗೂ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಅಖಿಲ ಭಾರತ ರೈತ ಸಂಘರ್ಷ ಸಮಿತಿ ಕರೆಯ ಮೇರೆಗೆ ದೇಶಾದ್ಯಂತ ಹೆದ್ದಾರಿ ತಡೆ ನಡೆಸಲಾಗುತ್ತಿದೆ.ಮುಂದಿನಗಳಲ್ಲಿ ನಮ್ಮ ಹೋರಾಟ ಮತ್ತಷ್ಟು ಉಗ್ರ ಸ್ವರೂಪ ಪಡೆಯಲಿದೆ ಎಂದು ಹೇಳಿದರು. ಇದೇ ವೇಳೆ ಕೇಂದ್ರ ಸರ್ಕಾರ ರೈತ ವಿರೋಧಿ ಮಸೂದೆಯ ಪ್ರತಿಯನ್ನು ಸುಟ್ಟುಹಾಕಿ ಧಿಕ್ಕಾರ ಕೂಗಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ಹೊಸಕೋಟೆ ಬಸವರಾಜು, ಪುನೀತ್, ಪಿ.ಮರಂಕಯ್ಯ, ಎಪಿಎಂಸಿ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷ ಅಹಿಂದ ಜವರಪ್ಪ, ಕಾರ್ಮಿಕ ಮುಖಂಡ ಸುನೀಲ್ ಸೇರಿದಂತೆ ಹಲವಾರು ರೈತರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.
ಮೈಸೂರು: ಕಾನೂನಿಗೆ ಭಂಗ ತರಲೆಂದೇ ನಾವು ಬೀದಿಗೆ ಬಂದಿರುವುದು ಬೇಕಿದ್ದರೆ ನಮ್ಮು ಬಂಧಿಸಿ ಎಂದು ಪೊಲೀಸರಿಗೆ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು. ಮೈಸೂರು-ನಂಜನಗೂಡು ರಸ್ತೆಯ ರಾಷ್ಟ್ರೀಯ ಹೆದ್ದಾರಿ ತಡೆದು ಸುಮಾರು 20 ನಿಮಿಷ ರೈತರು ಪ್ರತಿಭಟನೆ ನಡೆಸಿದರು.
ಈ ವೇಳೆ ಆಗಮಿಸಿದ ಪೊಲೀಸರು ದಯವಿಟ್ಟು ರಸ್ತೆ ತಡೆ ನಿಲ್ಲಿಸಿ ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಸಿದ ಬಡಗಲಪುರ ನಾಗೇಂದ್ರ ಇನ್ನು ಹತ್ತು ನಿಮಿಷ ಅವಕಾಶ ನೀಡುವಂತೆ ಮನವಿ ಮಾಡಿದರು. ನಂತರ ಸ್ಥಳಕ್ಕಾಗಮಿಸಿದ ಡಿಸಿಪಿ ರಸ್ತೆ ತಡೆ ಬಿಟ್ಟು ಒಂದು ಕಡೆ ಕುಳಿತು ಪ್ರತಿಭಟನೆ ನಡೆಸುವಂತೆ ಸೂಚಿಸಿದರು.
ಇದರಿಂದ ಸ್ವಲ್ಪ ಸಿಟ್ಟಾದ ಬಡಗಲಪುರ ನಾಗೇಂದ್ರ ನಾವು ಕಾನೂನಿಗೆ ಭಂಗ ತರಬೇಕು ಎಂದೇ ಹೆದ್ದಾರಿ ತಡೆ ನಡೆಸುತ್ತಿರುವುದು. ಬೇಕಿದ್ದರೆ ನಮ್ಮನ್ನು ಬಂಧಿಸಿ ಎಂದರು.
ನಾವು ಸಾರ್ವ ಜನಿಕರ ಓಡಾಟಕ್ಕೆ ತೊಂದರೆ ನೀಡಬಾರದು ಎಂದು ಪ್ರತಿಭಟನೆ ಕೈಬಿಡುತ್ತಿದ್ದೇವೆ. ನಿಮ್ಮ ಆದೇಶದಿಂದ ಪ್ರತಿಭಟನೆ ವಾಪಸ್ ಪಡೆಯುತ್ತಿಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರಿಯಾಗಿ ನಡೆದುಕೊಂಡಿದ್ದರೆ ನಾವೇಕೆ ರಸ್ತೆಗೆ ಬರುತ್ತಿದ್ದೆವು ಎಂದು ಪ್ರಶ್ನಿಸಿದರು.









.jpeg)

