ಈ ದೇಶದಲ್ಲಿ ಇಂದಿನಿಂದ 2ನೇ ಲಾಕ್ಡೌನ್ ಜಾರಿ

ಬೋರಿಸ್ ಜಾನ್ಸನ್
ಲಂಡನ್: ದೇಶದಲ್ಲಿ ಕೋವಿಡ್ ಪ್ರಕರಣಗಳ ಏರಿಕೆಯ ಹಿನ್ನೆಲೆಯಲ್ಲಿ ಇಂಗ್ಲೆಂಡ್ನಲ್ಲಿ ಇಂದಿನಿಂದ ಮತ್ತೆ ಲಾಕ್ ಡೌನ್ ಜಾರಿಯಾಗಿದ್ದು ಡಿಸೆಂಬರ್ 2ರವರೆಗೆ ಮುಂದುವರಿಯಲಿದೆ. ಈ ಲಾಕ್ಡೌನ್ಗೆ ಹೌಸ್ ಆಫ್ ಕಾಮನ್ಸ್ ಗುರುವಾರ ಅಂಗೀಕಾರ ನೀಡಿದೆ. ಲಾಕ್ ಡೌನ್ ಡಿಸೆಂಬರ್ 2ರ ನಂತರವೂ ವಿಸ್ತರಿಸಲಾಗುವ ಸಾಧ್ಯತೆಯನ್ನು ಬೋರಿಸ್ ಜಾನ್ಸನ್ ಸರಕಾರ ಅಲ್ಲಗಳೆದಿಲ್ಲ.
ಈ ಎರಡನೇ ಲಾಕ್ ಡೌನ್ನಲ್ಲಿ ಜನರಿಗೆ ನೀಡಲಾದ ಮುಖ್ಯ ಸಂದೇಶವೆಂದರೆ “ಮನೆಯಲ್ಲಿಯೇ ಇರಿ.'' ಮಾರ್ಚ್ 23ರಂದು ಆರಂಭಗೊಂಡಿದ್ದ ಮೊದಲಿನ ಲಾಕ್ ಡೌನ್ ಗೆ ಹೋಲಿಸಿದಾಗ ಈ ಎರಡನೇ ಲಾಕ್ ಡೌನ್ ಅತ್ಯಂತ ಕಟ್ಟುನಿಟ್ಟಾಗಿರಲಿದೆ. ಎಲ್ಲರೂ ಲಾಕ್ ಡೌನ್ ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಹೇಳಿದ್ದಾರೆ.
ಅಗತ್ಯ ವಸ್ತುಗಳಾದ ದಿನಸಿ ಸಾಮಾನು ಹಾಗೂ ಆಹಾರ ಪಾರ್ಸೆಲ್ ಒದಗಿಸುವ ಮಳಿಗೆಗಳನ್ನು ಹೊರತುಪಡಿಸಿ ಎಲ್ಲಾ ಮಳಿಗೆಗಳು ಮುಚ್ಚಲಿವೆ. ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು ಕಾರ್ಯಾಚರಿಸಲಿವೆ. ಜನರಿಗೆ ಮನೆಗಳಿಂದಲೇ ಕೆಲಸ ಮಾಡುವಂತೆ ಹೇಳಲಾಗಿದೆ. ಆದರೆ ಮನೆಗಳಲ್ಲಿಯೇ ಕೆಲಸ ಮಾಡಲು ಸಾಧ್ಯವಿಲ್ಲದವರಿಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಉದ್ಯೋಗ ಕಳೆದುಕೊಂಡವರಿಗೆ ಹಾಗೂ ನಷ್ಟದಲ್ಲಿರುವ ಸಂಸ್ಥೆಗಳಿಗೆ ಸರಕಾರ ಆರ್ಥಿಕ ಸಹಾಯ ಒದಗಿಸುತ್ತಿದೆ.
ಗುರವಾರ ಇಂಗ್ಲೆಂಡ್ನ ಹೌಸ್ ಆಫ್ ಕಾಮನ್ಸ್ 516- 38 ಮತಗಳ ಅಂತರದಲ್ಲಿ ಎರಡನೇ ಲಾಕ್ ಡೌನ್ ಗೆ ಅನುಮೋದನೆ ನೀಡಿದೆ. ವಿಪಕ್ಷ ಲೇಬರ್ ಪಾರ್ಟಿ ಮತ್ತಿತರ ಪಕ್ಷಗಳು ಬೆಂಬಲ ನೀಡಿವೆ. ಆದರೆ 34 ಮಂದಿ ಆಡಳಿತ ಕನ್ಸರ್ವೇಟಿವ್ ಪಕ್ಷದ ಸಂದರು ನಿಲುವಳಿಯ ವಿರುದ್ಧ ಮತ ಚಲಾಯಿಸಿದ್ದಾರೆ.
ಬುಧವಾರ ಇಂಗ್ಲೆಂಡ್ನಲ್ಲಿ 25,177 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 492 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.







