ಬೆಂಗಳೂರು: ಖಾಸಗೀಕರಣ ವಿರೋಧಿಸಿ ಸಾರಿಗೆ ನೌಕರರ ಪ್ರತಿಭಟನೆ

ಬೆಂಗಳೂರು, ನ.5: ಖಾಸಗಿ ಸಹಭಾಗಿತ್ವದ ಹೆಸರಿನಲ್ಲಿ ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು. ಕೊರೋನ ಸಂಕಷ್ಟದಲ್ಲಿ ಸಾರಿಗೆ ನೌಕರರಿಗೆ ಪೂರ್ಣ ವೇತನ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದರು.
ಸಿಐಟಿಯು ಕಾರ್ಮಿಕ ಸಂಘಟನೆಯ ವತಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಒಕ್ಕೂಟ ನೇತೃತ್ವದಲ್ಲಿ ನಾಲ್ಕು ಸಾರಿಗೆ ನಿಗಮಗಳ ಕಾರ್ಮಿಕರು ಗುರುವಾರ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಿದರು.
ಖಾಸಗಿ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆ ರದ್ದು ಮಾಡಬೇಕು. ಸರಕಾರದ ಒಡೆತನದಲ್ಲೇ ಎಲೆಕ್ಟ್ರಿಕ್ ಬಸ್ಸುಗಳು ಓಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರಿಯಾದ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಿಲ್ಲ. 50ಕ್ಕೂ ಹೆಚ್ಚು ಕಾರ್ಮಿಕರು ಕೊರೋನಗೆ ಬಲಿಯಾಗಿದ್ದಾರೆ. ಮೃತರ ಕುಟುಂಬಗಳಿಗೆ ಸರಕಾರವೇ 30 ಲಕ್ಷ ರೂ. ಪರಿಹಾರ ಘೋಷಿಸಿದರೂ ನಿಗಮಗಳಿಂದ ಈ ಆದೇಶ ಜಾರಿ ಆಗಿಲ್ಲ. ಕೂಡಲೇ ಪರಿಹಾರ ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಸಾರಿಗೆ ನಿಗಮಗಳಲ್ಲಿ ವಾಹನಗಳ ಕಾರ್ಯಾಚರಣೆ ಯಥಾಸ್ಥಿತಿಗೆ ಬರುವವರೆಗೂ ಕಾರ್ಮಿಕರಿಗೆ ಪೂರ್ಣ ವೇತನ ನೀಡಬೇಕು. ಕಾರ್ಮಿಕರು ಗಳಿಸಿದ್ದ ರಜೆಗಳನ್ನು ಅವರ ಖಾತೆಗೆ ಪುನಃ ವಾಪಸ್ ನೀಡಬೇಕು. ಕೊರೋನ ಪಾಸಿಟಿವ್ ಬಂದು ಕ್ವಾರಂಟೈನ್ ಆದ ಅವಧಿ ಹಾಗೂ ಚಿಕಿತ್ಸೆ ಪಡೆದ ಅವಧಿಯಲ್ಲಿ ವೇತನಸಹಿತ ರಜೆ ನೀಡುವ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.







