‘ಖೇಲೋ ಇಂಡಿಯಾ’ ಯೋಜನೆಯಡಿ ರಾಜ್ಯಕ್ಕೆ 19.50 ಕೋಟಿ ರೂ. ಬಿಡುಗಡೆ: ಸಿ.ಟಿ.ರವಿ

ಬೆಂಗಳೂರು, ನ.5: ರಾಜ್ಯದ 4 ಸ್ಥಳಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಒಳಾಂಗಣ ಮತ್ತು ವಿವಿಧೋದ್ದೇಶ ಬಳಕೆಯ ಹಾಲ್ ಗಳನ್ನು ನಿರ್ಮಿಸಲು ಖೇಲೋ ಇಂಡಿಯಾ ಯೋಜನೆಯಡಿ ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ರಾಜ್ಯಕ್ಕೆ 19.50 ಕೋಟಿ ರೂ.ಬಿಡುಗಡೆ ಮಾಡಿದ್ದಾರೆ ಎಂದು ಪ್ರವಾಸೋದ್ಯಮ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.
ಉಡುಪಿಯ ಕಾರ್ಕಳದಲ್ಲಿ ಸುಮಾರು 3.50 ಕೋಟಿ ರೂ.ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ, ಚಿಕ್ಕಮಗಳೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧೋದ್ದೇಶ ಬಳಕೆಯ ಒಳಾಂಗಣ ಸಭಾಂಗಣ 4.50 ಕೋಟಿ ರೂ., ಚಿಕ್ಕಮಗಳೂರಿಲ್ಲಿ ಸಿಂಥೆಟಿಕ್ ಅಥ್ಲೆಟಿಕ್ ಟ್ರಾಕ್ ನಿರ್ಮಾಣಕ್ಕೆ 7 ಕೋಟಿ ರೂ.ಹಾಗೂ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧೋದ್ದೇಶ ಹಾಲ್ 4.50 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಕೇಂದ್ರ ಸರಕಾರದ ಅಧೀನ ಕಾರ್ಯದರ್ಶಿ ಒ.ಪಿ.ಚಂಚಲ್ ಆದೇಶ ಹೊರಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಹೊಸದಿಲ್ಲಿಗೆ ಭೇಟಿ ನೀಡಿದ್ದ ಸಚಿವ ಸಿ.ಟಿ.ರವಿ, ಕೇಂದ್ರ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಕ್ರೀಡೆಗಳನ್ನು ಉತ್ತೇಜಿಸಲು ಮೂಲಭೂತ ಸೌಕರ್ಯ, ಕ್ರೀಡಾಂಗಣ ನಿರ್ಮಾಣ, ಆಧುನಿಕ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಕೇಂದ್ರ ಸರಕಾರದಿಂದ ಅನುಮೋದನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಯುವಜನ ಮತ್ತು ಸಬಲೀಕರಣ ಇಲಾಖೆಯು ಶೀಘ್ರದಲ್ಲೇ ಕಾಮಗಾರಿಯನ್ನು ಆರಂಭಿಸಲಿದೆ ಎಂದು ತಿಳಿದು ಬಂದಿದೆ.
ಕೇಂದ್ರಕ್ಕೆ ಅಭಿನಂದನೆ: ಕೋವಿಡ್ 19 ನಡುವೆಯೂ ರಾಜ್ಯದ ಮನವಿಯನ್ನು ಪುರಸ್ಕರಿಸಿ, ಸುಮಾರು 20 ಕೋಟಿ ರೂ.ವೆಚ್ಚದಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸಲು ಅನುಮೋದನೆ ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುವಜನ ಕ್ರೀಡಾ ಸಚಿವ ಕಿರಣ್ ಕಿಜಿಜು ಅವರಿಗೆ ಸಚಿವ ಸಿ.ಟಿ.ರವಿ ಅಭಿನಂದನೆ ಸಲ್ಲಿಸಿದ್ದಾರೆ.







