ಮಸೀದಿಗಳ ಧ್ವನಿವರ್ಧಕಗಳ ತೆರವು: ಚರ್ಚೆಗೆ ಗ್ರಾಸವಾದ ಡಿಜಿಪಿ ಪತ್ರ

ಪ್ರವೀಣ್ ಸೂದ್
ಬೆಂಗಳೂರು, ನ.5: ರಾಜ್ಯ ವ್ಯಾಪಿ ಮಸೀದಿಗಳಲ್ಲಿನ ಧ್ವನಿವರ್ಧಕ ತೆರವುಗೊಳಿಸುವ ಸಂಬಂಧ ನಗರ ಪೊಲೀಸ್ ಆಯುಕ್ತ ಮತ್ತು ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡುವಂತೆ ಕೋರಿರುವ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರ ಪತ್ರವೊಂದು ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದೆಲ್ಲೆಡೆ ಇರುವ ಮಸೀದಿಗಳಿಗೆ ಅಳವಡಿಸಿರುವ ಧ್ವನಿವರ್ಧಕಗಳ ನಿಷೇಧಿಸಿ ತೆರವುಗೊಳಿಸುವಂತೆ ಒತ್ತಾಯಿಸಿ ವಕೀಲ ಹರ್ಷ ಮುತಾಲಿಕ್ ಎಂಬವರು ಡಿಜಿಪಿಗೆ ಪತ್ರವೊಂದನ್ನು ಕಳುಹಿಸಿದ್ದರು. ಇದರನ್ವಯ ಮಾಹಿತಿ ಮತ್ತು ಸೂಕ್ತ ಕ್ರಮ ಕೈಗೊಳ್ಳುವ ಕುರಿತು ನಗರ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ.
ಆದರೆ, ಮಸೀದಿಗಳಲ್ಲಿ ಧ್ವನಿವರ್ಧಕ ತೆರವುಗೊಳಿಸುವಂತೆ ಯಾವುದೇ ರೀತಿಯ ಅಧಿಕೃತ ಆದೇಶ ಹೊರಬಂದಿಲ್ಲ. ಈ ಬಗ್ಗೆ ಚರ್ಚೆ ನಡೆಯುತ್ತಿದೆಯೇ ಹೊರತು, ಕ್ರಮಕ್ಕೆ ಮುಂದಾಗಿಲ್ಲ. ಇದಕ್ಕಾಗಿ ಇಲಾಖೆಯಲ್ಲಿನ ಕಾನೂನು ವಿಭಾಗದ ಅಭಿಪ್ರಾಯವೂ ಬೇಕಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮನವಿ ಪತ್ರದಲ್ಲೇನಿದೆ ?
ರಾಜ್ಯದಾದ್ಯಂತ ನಮಾಝ್ನ ಪ್ರಸಾರ ಮಾಡುತ್ತಿರುವುದು ಸರ್ವೇಸಾಮಾನ್ಯವಾಗಿದ್ದು, ಈ ರೀತಿಯ ಅನಧಿಕೃತ ಧ್ವನಿವರ್ಧಕಗಳ ಬಳಕೆ ಹಾಗೂ ಮೈಕ್ರೋಫೋನ್ ಬಳಕೆಯನ್ನು ಮಾಡಬಾರದೆಂದು ಈಗಾಗಲೇ ಸರ್ವೋಚ್ಛ ನ್ಯಾಯಾಲಯವು ಆದೇಶವನ್ನು ಮಾಡಿದೆ. ಮಾಲಿನ್ಯ ನಿಯಂತ್ರಣ ಕಾಯ್ದೆಯ ನಿಯಮ ಮೀರಿ ಮಿತಿಗಿಂತಲೂ ಹೆಚ್ಚಿಗೆ ಧ್ವನಿವರ್ಧಕಗಳನ್ನು ಹಾಕುವುದರಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಕಡೆ ಗಮನ ಕೊಡಲು ಆಗುವುದಿಲ್ಲ. ವಯೋವೃದ್ಧರಿಗೆ ಆರೋಗ್ಯದ ಸಮಸ್ಯೆ ಇದ್ದು ಅಂತಹವರಿಗೆ ಬೇರೆ ಬೇರೆ ಸಮಸ್ಯೆಗಳು ಉಲ್ಬಣವಾಗುತ್ತಿವೆ. ಬೇರೆ ಧರ್ಮದವರು ತಾವು ಪ್ರಾರ್ಥನೆ ಹಾಗೂ ಧ್ಯಾನ ಮಾಡಲು ಆಗುವುದಿಲ್ಲ. ಆದರೆ ಎಲ್ಲಾ ಮಸೀದಿಗಳು ಊರಿನ ಒಳಗಡೆ ಇದ್ದು, ವಾಸವಾಗಿರುವ ಮನೆಗಳ ಮಧ್ಯದಲ್ಲಿಯೇ ಇರುವುದರಿಂದ ವಿದ್ಯಾರ್ಥಿಗಳಿಗೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಹಾಗಾಗಿ ಈ ರೀತಿ ಧ್ವನಿವರ್ಧಕಗಳ ಮುಖಾಂತರ ನಮಾಝ್ ಮಾಡುವ ಮಸೀದಿಗಳಿಗೆ ಧ್ವನಿವರ್ಧಕಗಳ ನಿರ್ಬಂಧ ಹೇರಿ ಅವುಗಳನ್ನು ತೆರವುಗೊಳಿಸಬೇಕೆಂದು ಹರ್ಷ ಮುತಾಲಿಕ್ ಅವರು ಪೋಲಿಸ್ ಮಹಾ ನಿರ್ದೇಶಕರಿಗೆ ಮನವಿ ಮಾಡಿದ್ದರು.







