ಈ ಪಟ್ಟಣದ ಮೇಯರ್ ಆಗಿ ಶ್ವಾನ ಆಯ್ಕೆ !

Photo: Facebook/Lady Stone
ವಾಷಿಂಗ್ಟನ್ :ಅಮೆರಿಕಾದ ಅಧ್ಯಕ್ಷ ಗಾದಿಗಾಗಿ ಜಿದ್ದಾಜಿದ್ದಿನ ಹೋರಾಟ ಡೊನಾಲ್ಡ್ ಟ್ರಂಪ್ ಹಾಗೂ ಜೋ ಬೈಡನ್ ನಡುವೆ ನಡೆಯುತ್ತಿರಬಹುದು. ಆದರೆ ಅದನ್ನೆಲ್ಲಾ ಅರೆಕ್ಷಣ ಮರೆತು ಬಿಡಿ. ಏಕೆಂದರೆ ಅಮೆರಿಕಾದ ಒಂದು ಪಟ್ಟಣ ತನ್ನ ಮೇಯರ್ ಆಗಿ ಒಂದು ನಾಯಿ-ವಿಲ್ಬುರ್ ಬೀಸ್ಟ್ ಅನ್ನು ಆರಿಸಿದೆ.
'ವಿಲ್ಬುರ್ ಬೀಸ್ಟ್' ಒಂದು ಫ್ರೆಂಚ್ ಬುಲ್ ಡಾಗ್ ಆಗಿದ್ದು ಅದು ಕೆಂಟಕಿಯಲ್ಲಿರುವ ರ್ಯಾಬಿಟ್ ಹ್ಯಾಶ್ನ ಹೊಸ ಮೇಯರ್.
ದಿ 'ಬೀಸ್ಟ್' 13,143 ಮತಗಳೊಂದಿಗೆ ಗೆದ್ದಿದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಈ ಪಟ್ಟಣದಲ್ಲಿ ಇಷ್ಟೊಂದು ದೊಡ್ಡ ಅಂತರದಲ್ಲಿ ಮೇಯರ್ ಜಯ ಗಳಿಸಿರುವುದು ಇದೇ ಮೊದಲ ಬಾರಿ.
"ಒಟ್ಟು 22,985 ಮತಗಳ ಪೈಕಿ ವಿಲ್ಬುರ್ ಬೀಸ್ಟ್ 22,985 ಮತಗಳನ್ನು ಗಳಿಸಿದೆ,'' ಎಂದು ರ್ಯಾಬಿಟ್ ಹ್ಯಾಶ್ ಪಟ್ಟಣದ ಅಧಿಕಾರವನ್ನು ಹೊಂದಿರುವ ರ್ಯಾಬಿಟ್ ಹ್ಯಾಶ್ ಹಿಸ್ಟಾರಿಕಲ್ ಸೊಸೈಟಿ ತನ್ನ ಫೇಸ್ ಬುಕ್ ಪುಟದಲ್ಲಿ ತಿಳಿಸಿದೆ.
ವಿಲ್ಬುರ್ ಬೀಸ್ಟ್ ಈ ಚುನಾವಣೆಯನ್ನು ಜ್ಯಾಕ್ ರ್ಯಾಬಿಟ್, ದಿ ಬೀಗಲ್, ಪಾಪ್ಪಿ ಹಾಗೂ ಗೋಲ್ಡನ್ ರಿಟ್ರೀವರ್ ವಿರುದ್ಧ ಸ್ಪರ್ಧಿಸಿತ್ತು. ಈ ಪಟ್ಟಣದ ರಾಯಭಾರಿ ಹುದ್ದೆಯನ್ನು 12 ವರ್ಷ ಪ್ರಾಯದ ಬಾರ್ಡರ್ ಕೊಲ್ಲಿ ಜಾತಿಯ ಲೇಡಿ ಸ್ಟೋನ್ ಹೊಂದಿರಲಿದೆ.
ಸ್ಥಳೀಯಾಡಳಿತ ಸಂಸ್ಥೆಯ ವ್ಯಾಪ್ತಿಗೆ ಬಾರದ ರ್ಯಾಬಿಟ್ ಹ್ಯಾಶ್ ಪಟ್ಟಣವು ಓಹಿಯೋ ನದಿಯ ದಡದಲ್ಲಿದ್ದು ಇಲ್ಲಿ 1990ರಿಂದ ನಾಯಿಯೇ ಮೇಯರ್ ಆಗಿ ಆಯ್ಕೆಯಾಗುತ್ತಿದೆ. ಮತದಾನ ಪ್ರಕ್ರಿಯೆಯ ಭಾಗವಾಗಿ ಸದಸ್ಯರು ಹಿಸ್ಟಾರಿಕಲ್ ಸೊಸೈಟಿಗೆ ಒಂದು ಡಾಲರ್ ದೇಣಿಗೆ ನೀಡುತ್ತಾರೆ.
ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ವಿಲ್ಬುರ್ ತನ್ನ ರ್ಯಾಬಿಟ್ ಹ್ಯಾಶ್ ಹಿಸ್ಟಾರಿಕಲ್ ಸೊಸೈಟಿಗೆ ದೇಣಿಗೆ ಸಂಗ್ರಹಿಸಲಿದ್ದಾನೆ.







