ಚುನಾವಣಾ ಫಲಿತಾಂಶ ಪ್ರಶ್ನೆಗೀಡಾದರೆ ಮುಂದೇನು?

ವಾಶಿಂಗ್ಟನ್, ನ. 5: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ, ಹಲವು ಮಹತ್ವದ ರಾಜ್ಯಗಳಿಂದ ತೃಪ್ತಿದಾಯಕ ಫಲಿತಾಂಶ ಬರುವ ಮುನ್ನವೇ, ನಾನು ಗೆದ್ದಿದ್ದೇನೆ ಎಂಬುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿಯೇ ಬಿಟ್ಟರು.
ಇದೊಂದು ಅಪ್ರಬುದ್ಧ ಹಾಗೂ ತಪ್ಪು ಹೆಜ್ಜೆ ಎಂಬುದಾಗಿ ಬಳಿಕ ಹಲವರು ಬಣ್ಣಿಸಿದರು. ಅಷ್ಟೇ ಅಲ್ಲ, ಅಂಚೆ ಮತಪತ್ರಗಳ ಎಣಿಕೆಯನ್ನು ತಕ್ಷಣ ನಿಲ್ಲಿಸಬೇಕೆಂದೂ ಟ್ರಂಪ್ ಒತ್ತಾಯಿಸಿದರು. ಇಂಥ ಮತ ಎಣಿಕೆಯು ‘ದೇಶದ ವಿರುದ್ಧ ಮಾಡುವ ವಂಚನೆ’ಯಾಗಿದೆ ಎಂಬುದಾಗಿಯೂ ಹೇಳಿಕೊಂಡರು.
ಚುನಾವಣಾ ಫಲಿತಾಂಶವು ಮುಂದಕ್ಕೆ ಹಲವು ವಿವಾದಗಳಿಗೆ, ನ್ಯಾಯಾಂಗ ಪ್ರಕ್ರಿಯೆಗಳಿಗೆ ಒಳಗಾಗಬಹುದು ಎಂಬ ಸೂಚನೆಯನ್ನು ಟ್ರಂಪ್‌ರ ಹೇಳಿಕೆಗಳು ನೀಡಿವೆ.
ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರು ರಿಪಬ್ಲಿಕನ್ ಪಕ್ಷದ ಬೆಂಬಲಿಗರಿಗಿಂತ ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಅಂಚೆ ಮತದಾನದಲ್ಲಿ ಪಾಲ್ಗೊಂಡಿದ್ದಾರೆ ಎನ್ನುವುದನ್ನು ಆರಂಭಿಕ ಅಂಕಿಅಂಶಗಳು ತಿಳಿಸಿವೆ. ಅಂಚೆ ಮತಗಳನ್ನು ಚುನಾವಣಾ ದಿನಕ್ಕಿಂತ ಮುಂಚೆ ಲೆಕ್ಕ ಮಾಡದ ಪೆನ್ಸಿಲ್ವೇನಿಯ ಮತ್ತು ವಿಸ್ಕಾನ್ಸಿನ್ ಮುಂತಾದ ರಾಜ್ಯಗಳಲ್ಲಿ, ಆರಂಭಿಕ ಫಲಿತಾಂಶವು ಟ್ರಂಪ್ ಪರವಾಗಿದ್ದವು. ಯಾಕೆಂದರೆ, ಆಗ ಅಂಚೆ ಮತಪತ್ರಗಳ ಎಣಿಕೆಯಾಗಿರಲಿಲ್ಲ.
ಅಂಚೆ ಮತಗಳ ಎಣಿಕೆಯಾಗುವ ಮುನ್ನವೇ ಟ್ರಂಪ್ ತನ್ನ ವಿಜಯವನ್ನು ಘೋಷಿಸಬಹುದು ಎನ್ನುವುದು ಡೆಮಾಕ್ರಟಿಕರ ಚಿಂತೆಯಾಗಿತ್ತು. ಹಾಗೂ ಅವರು ಊಹಿಸಿದಂತೆಯೇ ನಡೆಯಿತು. ನಾನು ಚುನಾವಣೆಯಲ್ಲಿ ಗೆದ್ದಿದ್ದೇನೆ ಹಾಗೂ ಅಂಚೆ ಮತಗಳ ಎಣಿಕೆಯನ್ನು ನಿಲ್ಲಿಸುವಂತೆ ಕೋರಿ ನ್ಯಾಯಾಲಯಕ್ಕೆ ಹೋಗುತ್ತೇನೆ ಎಂದು ಅವರು ಬುಧವಾರ ಘೋಷಿಸಿದರು.
ಫಲಿತಾಂಶವನ್ನು ನಿರ್ಧರಿಸುವ ಮಹತ್ವದ ರಾಜ್ಯಗಳಲ್ಲಿ ನಿಕಟ ಸ್ಪರ್ಧೆ ಏರ್ಪಟ್ಟಾಗ ಹಿನ್ನಡೆ ಅನುಭವಿಸಿದವರು ನ್ಯಾಯಾಲಯಗಳಿಗೆ ಹೋಗಬಹುದು. ರಾಜ್ಯಗಳಲ್ಲಿ ದಾಖಲಾದ ಪ್ರಕರಣಗಳು ಅಂತಿಮವಾಗಿ ಸುಪ್ರೀಂ ಕೋರ್ಟ್ ತಲುಪಬಹುದು.
ಚುನಾವಣೆಗೆ ಕೆಲವೇ ದಿನಗಳು ಇರುವಾಗ ಟ್ರಂಪ್ ಆ್ಯಮಿ ಕಾನಿ ಬ್ಯಾರೆಟ್‌ರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯಾಗಿ ನೇಮಿಸಿದರು.
ಈಗ ಸುಪ್ರೀಂ ಕೋರ್ಟ್‌ನಲ್ಲಿ ಬಲಪಂಥೀಯರು 6-3 ಬಹುಮತ ಹೊಂದಿದ್ದಾರೆ. ಒಂದು ವೇಳೆ ವಿವಾದಿತ ಚುನಾವಣೆಯನ್ನು ನ್ಯಾಯಾಲಯಗಳು ನಿರ್ಧರಿಸಬೇಕಾದ ಸಂದರ್ಭ ಎದುರಾದರೆ, ಸುಪ್ರೀಂ ಕೋರ್ಟ್ ಟ್ರಂಪ್ ಪರವಾಗಿ ತೀರ್ಪು ನೀಡಬಹುದಾಗಿದೆ.







