ಸಿದ್ದರಾಮಯ್ಯಗೆ ಹುಚ್ಚು ಹಿಡಿದುಹೋಗಿದೆ: ಈಶ್ವರಪ್ಪ

ಉಡುಪಿ, ನ.5: ಹುಚ್ಚು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಹುಚ್ಚು. ಮುಖ್ಯಮಂತ್ರಿ ಸ್ಥಾನ ಹೋದ ನಂತರ ಸಿದ್ಧರಾಮಯ್ಯರಿಗೆ ಹುಚ್ಚು ಹಿಡಿದು ಹೋಗಿದೆ ಎಂದು ಕರ್ನಾಟಕ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠಕ್ಕೆ ಇಂದು ರಾತ್ರಿ ಭೇಟಿ ನೀಡಿದ ಅವರು, ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದರು. ಉಪ ಚುನಾವಣಾ ಫಲಿತಾಂಶ ಬಂದ ಬಳಿಕ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದೆ ಎಂದು ಭವಿಷ್ಯ ನುಡಿದ ಸಿದ್ಧರಾಮಯ್ಯರಿಗೆ ಚಾಟಿ ಬೀಸಿದ ಅವರು, ಯಾಕೆ ಮುಖ್ಯಮಂತ್ರಿ ಬದಲಾವಣೆಯಾಗಬೇಕು, ಯಾರು ಹೇಳಿದರು ಇವರಿಗೆ ಎಂದು ಮರು ಪ್ರಶ್ನಿಸಿದರು.
ಮುಖ್ಯಮಂತ್ರಿ ಬದಲಾವಣೆ ಎಂದು ಸಿದ್ಧರಾಮಯ್ಯಗೆ ಆಕಾಶದಿಂದ ಸುದ್ದಿ ಉದುರಿದ್ಯಾ? ಅಥವಾ ಮೋದಿ, ನಡ್ಡಾ, ಅಮಿತಾಶ್ ಶಾ ಅವರೇ ಫೋನ್ ಮಾಡಿ ಹೇಳಿದ್ರಾ? ಸುಮ್ಮಸುಮ್ಮನೆ ದಿಲ್ಲಿಯಿಂದ ಸುದ್ದಿ ಬಂದಿದೆ ಎಂದು ಯಾಕೆ ಹೇಳುತ್ತೀರಿ ಎಂದು ಕೋಪದಿಂದ ಪ್ರಶ್ನಿಸಿದ ಈಶ್ವರಪ್ಪ, ಕೆಟ್ಟ ರಾಜಕಾರಣ ಮಾಡುವುದಕ್ಕೆ ಕರ್ನಾಟಕ ರಾಜ್ಯ ಕಾಂಗ್ರೆಸನವರೇ ಕಾರಣ. ಯಾಕೆ ಇಂಥ ಕೆಟ್ಟ ರಾಜಕಾರಣ ಮಾಡುತ್ತೀರಿ ಎಂದರು.
ಮುಖ್ಯಮಂತ್ರಿ ಸ್ಥಾನ, ಸರಕಾರವನ್ನು ಕಳೆದುಕೊಂಡ ಮೇಲೆ ಜನರ ಮದ್ಯ ಹೋಗಿ ಜನರ ಪರವಾಗಿ ಕೆಲಸ ಮಾಡಿ ಮತ್ತೆ ಮುಖ್ಯಮಂತ್ರಿ ಯಾಗಲು ಪ್ರಯತ್ನ ಮಾಡಿ. ಅದು ಬಿಟ್ಟು ಇಂಥ ಕೆಟ್ಟ ರಾಜಕಾರಣ ಮಾಡುವುದು ಒಳ್ಳೆಯದಲ್ಲ ಎಂದು ಸಿದ್ಧರಾಮಯ್ಯರಿಗೆ ಸಲಹೆ ನೀಡಿದರು.
ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಬಂಧನ ವಿಚಾರ ರಾಜಕೀಯ ಪ್ರೇರಿತ ಎಂಬ ಸಿದ್ಧರಾಮಯ್ಯರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಹಾಗಾದ್ರೆ ಕೊಲೆ ಪ್ರಕರಣದ ತನಿಖೆ ಮಾಡಬಾರದಾ, ಕೊಲೆಗೆ ಕಾಂಗ್ರೆಸ್ ಬೆಂಬಲ ಕೊಡುತ್ತಾ. ಸಿದ್ಧರಾಮಯ್ಯ ಬೆಂಬಲ ಕೊಡುವುದಾದರೆ ಒಪ್ಪಿಕೊಂಡು ಬಿಡಲಿ. ನಮ್ಮವರನ್ನೆಲ್ಲಾ ಜೈಲಿಗೆ ಕಳುಹಿಸಿದ್ದು ಕೂಡಾ ರಾಜಕೀಯ ಪ್ರೇರಿತನಾ ಎಂದು ಕೇಳಿದ ಈಶ್ವರಪ್ಪ, ಬಾಯಿಗೆ ಬಂದಂತೆ ಮಾಡನಾಡುವುದು ವಿರೋಧ ಪಕ್ಷದ ನಾಯಕನಿಗೆ ಶೋಭೆ ತರುವುದಿಲ್ಲ ಎಂದರು.
ತಪ್ಪಿತಸ್ಥನಲ್ಲದಿದ್ದರೆ ಬಿಡುಗಡೆಯಾಗಿ ಹೊರಗೆ ಬರಲಿ. ಆದರೆ ಕಾಂಗ್ರೆಸ್‌ನ ಈ ಧೋರಣೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದರು.







